ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಪಕ್ಷ ನನಗೆ ಟಾಸ್ಕ್‌ಕೊಡಲಿ, ಕೇವಲ ಹದಿನೈದೇ ದಿನದಲ್ಲಿ ಜೆಡಿಎಸ್‌ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ‘ ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ನಮ್ಮ ಶಾಸಕರು ಕೇವಲ ಶಾಸಕರಾಗಿ ಅಥವಾ ರಾಜಕೀಯ ಉದ್ದೇಶಕ್ಕಾಗಿ ನಮ್ಮೊಂದಿಗಿಲ್ಲ. ಪಕ್ಷ ಮತ್ತು ಶಾಸಕರ ನಡುವೆ ರಕ್ತ ಸಂಬಂಧಕ್ಕಿಂತ ಮಿಗಿಲಾದ ಗಾಢ ಬಾಂಧವ್ಯವಿದೆ ಎನ್ನುವ ಸತ್ಯವನ್ನು ನೀವು ಅರಿಯಬೇಕು ಎಂದು ನಿಖಿಲ್ ತಿಳಿಸಿದ್ದಾರೆ.
ನಾಯಕರು- ಶಾಸಕರ ನಡುವೆ ಬಿಡಿಸಲಾಗದ ಭಾವನಾತ್ಮಕ ಬೆಸುಗೆ ಇದೆ. ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್‌ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೆಸರೇಳದೆ ಪರೋಕ್ಷವಾಗಿ ನಿಖಿಲ್ ಕಿಡಿ ಕಾರಿದ್ದಾರೆ.
ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುತ್ತೇವೆಯೇ? ಇಲ್ಲ. ‘ನಿಖಿಲ್‌ಬಚ್ಚಾ.. ಪಾಪ ನಿಖಿಲ್..‘ ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ನಿಖಿಲ್ ತಿರುಗೇಟು ನೀಡಿದ್ದಾರೆ.
ಪಕ್ಷವನ್ನು ಮರಳಿ ಕಟ್ಟೋಣ, ಬೀದಿಯಲ್ಲಿ ನಿಂತು ಜನಪರವಾಗಿ ಹೊರಾಡೋಣ ಎಂದು ನನ್ನ ಕಾರ್ಯಕರ್ತ ಬಂಧುಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ನಿಖಿಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.