ಹೆಚ್.ಸಿ ಗಿರೀಶ್, ಹರಿಯಬ್ಬೆ, ಎಂ.ಎಲ್.ಗಿರಿಧರ ಮಲ್ಲಪ್ಪನಹಳ್ಳಿ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಭದ್ರ ಕೋಟೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಮಟ್ಟದಿಂದ ಪಕ್ಷದ ಬಲವರ್ಧನೆಗೆ ಮುನ್ನುಡಿ ಬರೆಯಲು ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಹಲವು ಲೋಪಗಳುಳ್ಳ ವಿಷಯಗಳೊಂದಿಗೆ ಜೆಡಿಎಸ್ ಪಕ್ಷದ ಭವಿಷ್ಯದ ಭರವಸೆಯ ನಾಯಕ ನಿಖಿಲ್ ಕುಮಾರಸ್ವಾಮಿ ಆಗಸ್ಟ್-3 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ಜನರೊಂದಿಗೆ ಜನತಾದಳ‘ ಅಭಿಯಾನ ಮುಂದಿಟ್ಟುಕೊಂಡು ಒಂಟಿ ಸಲಗನಂತೆ ಇಡೀ ರಾಜ್ಯ ಸುತ್ತುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡೊಡೆದು ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭವಲ್ಲ. ಹಳೆಯ ಮೈಸೂರು ಪ್ರದೇಶ ಏಕೆ ಇಡೀ ರಾಜ್ಯದ ಮೂಲೆ ಮೂಲೆಯಲ್ಲಿ ಜೆಡಿಎಸ್ ಕಾರ್ಯಕರ್ತರಿದ್ದಾರೆ. ಆದರೆ ಅವರನ್ನ ಬಡಿದೆಬ್ಬಿಸಿ ಹೊರಗೆ ತರುವ ಕಾರ್ಯವನ್ನು ಸದ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಮತ್ತು ಅವರ ಯುವ ಪಡೆ ಟೊಂಕ ಕಟ್ಟಿ ಮಾಡುತ್ತಿದೆ.
ಒಕ್ಕಲಿಗ ಭದ್ರಕೋಟೆಯಲ್ಲಿ ಜೆಡಿಎಸ್ ಒಂದು ಪ್ರಬಲ ಶಕ್ತಿ ಎನ್ನುವ ಸಂದೇಶವನ್ನು ದೂರ ಮಾಡಿ ಸಮಗ್ರ ಕರ್ನಾಟಕಕ್ಕೆ ಜೆಡಿಎಸ್ ಒಂದು ಶಕ್ತಿ ಎನ್ನುವ ಭಾವನೆಯನ್ನು ತಮ್ಮ ರಾಜಕೀಯ ವಿರೋಧಿಗಳಿಗೆ ರವಾನಿಸುವ ಕಾರ್ಯವನ್ನೂ ಏಕಕಾಲದಲ್ಲೇ ನಿಖಿಲ್ ಮಾಡುತ್ತಿರುವುದು ಎಲ್ಲೋ ಒಂದು ಕಡೆ ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡಿಸಿದೆ ಎನ್ನುವ ವಾತಾವರಣ ಸದ್ಯಕ್ಕೆ ನಿರ್ಮಾಣವಾದಂತೆ ಕಾಣುತ್ತಿದೆ.
ನಿಖಿಲ್ ರಾಜ್ಯ ಸುತ್ತುವ ಸಂದರ್ಭದಲ್ಲಿ ಕೇವಲ ಒಕ್ಕಲಿಗ ಗುರು ಪೀಠಗಳಿಗೆ ಹೋಗುತ್ತಿಲ್ಲ, ಲಿಂಗಾಯತ ಗುರುಪೀಠ, ಇತರೆ ಹಿಂದುಳಿದ ದಲಿತ ಧಾರ್ಮಿಕ ಪೀಠಗಳಿಗೂ ಭೇಟಿ ನೀಡುವ ಮೂಲಕ ಜನಮನದಲ್ಲಿ ನಿಖಿಲ್ ಉಳಿಯುತ್ತಿದ್ದಾರೆ. ಇದೇ 2025ನೇ ಸಾಲಿನ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್/ ತಾಪಂ ಮತ್ತು ಬಿಬಿಎಂಪಿ ಚುನಾವಣೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಲು ಪೂರ್ವಭಾವಿಯಾಗಿ ನಿಖಿಲ್ ಪ್ರಚಾರ ಕೈಗೊಂಡಿದ್ದಾರೆ ಎನ್ನುವ ವಾತಾವರಣ ಕೂಡಾ ಇದೆ ಎನ್ನಲಾಗಿದೆ.
ಎನ್ ಡಿಎ ಒಕ್ಕೂಟದ ಪ್ರಮುಖ ಪಕ್ಷ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿಕೂಟದಿಂದ ಹೋಗುವುದು ಬೇಡ ಎನ್ನುತ್ತಿದ್ದಾರೆ. ಆದರೆ ಊಹಾಪೋಹಗಳಿಗೆ ನಿಖಿಲ್ ತಲೆಕೆಡಿಸಿಕೊಳ್ಳದೆ ಜೆಡಿಎಸ್ ಕೂಡ ಯಾವುದೇ ಪರಿಸ್ಥಿತಿ ಎದುರಾದರು ಹೋರಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ಜನರೊಂದಿಗೆ ಜನತಾದಳ‘ ಅಭಿಯಾನ ಆರಂಭಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ.
ಮಂಡ್ಯ ಲೋಕಸಭೆ, 2023ರ ರಾಮನಗರ ವಿಧಾನಸಭೆ, ಇತ್ತೀಚಿನ ಚನ್ನಪಟ್ಟಣ ಉಪಚುನಾವಣೆ ಸೇರಿದಂತೆ ಮೂರು ಚುನಾವಣೆಗಳಲ್ಲಿ ನಿಖಿಲ್ ಸೋತಿದ್ದಾರೆ. ಹಾಗಾಂತ ಅವರು ಪೂರ್ಣ ಮುಳುಗಿ ಹೋಗಿಲ್ಲ. ದೇಶದ ಘಟಾನುಘಟಿ ನಾಯಕರೆಲ್ಲರೂ ಸೋಲು-ಗೆಲುವಿನೊಂದಿಗೆ ಸಾಗಿದ್ದಾರೆ.
ಜನರೊಂದಿಗೆ ಜನತಾದಳ ಕಾರ್ಯಕ್ರಮದ ನಿಖಿಲ್ ಪರಿಪಕ್ವ ರಾಜಕೀಯ ನಾಯಕರಂತೆ ನಡೆದುಕೊಳ್ಳುತ್ತಿದ್ದು ತಮ್ಮ ರಾಜಕೀಯ ಸಂಘಟನಾತ್ಮಕ ಕೌಶಲ್ಯದಿಂದ ಎದುರಾಳಿಗಳು ಸೇರಿದಂತೆ ರಾಜಕೀಯ ವಿಶ್ಲೇಷಕರು ನಿಬ್ಬೆರಗುಗೊಂಡಿರುವುದಂತ ಸತ್ಯ.
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮತ ಗಳಿಕೆಯಲ್ಲಿ ಕುಸಿತಕಂಡಿದೆ. 2018ರಲ್ಲಿ ಶೇ. 18.36 ರಷ್ಟಿದ್ದ ಮತಗಳಿಕೆ ಪ್ರಮಾಣ ಕೇವಲ ಶೇ. 13.29ಕ್ಕೆ ಕುಸಿದಿದೆ. ಸದ್ಯ ಜೆಡಿಎಸ್ ಪಕ್ಷದಿಂದ ಗೆದ್ದವರು 18 ಮಂದಿ ಶಾಸಕರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಮತ ಗಳಿಕೆ ಪಾಲನ್ನು ಶೇ 20 ರಷ್ಟು ಮರಳಿ ಪಡೆಯಲು ಮತ್ತು ಭವಿಷ್ಯದ ಕರ್ನಾಟಕದ ರಾಜಕೀಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾ ಬಲ ಪಡೆಯದಿದ್ದರೂ ಕಿಂಗ್ ಮೇಕರ್ ಪಾತ್ರ ವಹಿಸುವಂತೆ ನೋಡಿಕೊಳ್ಳಲು ನಿಖಿಲ್ ಯೋಜಿಸಿದ್ದಾರೆ ಎನ್ನಲಾಗಿದೆ.
ನಿಖಿಲ್ ಕುಮಾರಸ್ವಾಮಿ ಅವರ ಮೂರು ಸೋಲುಗಳು….
2019ರ ಮಂಡ್ಯ ಲೋಕಸಭಾ ಚುನಾವಣೆಯ್ಲಲಿ ತಂದೆ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿಖಿಲ್ ಅವರ ಸೋಲು ಮಾತ್ರ ಒಂದು ಕಹಿ ಅನುಭವ. 2023ರ ರಾಮನಗರ ವಿಧಾನಸಭಾ ಚುನಾವಣೆ ಮತ್ತು 2024ರಲ್ಲಿ ತಂದೆಯಿಂದ ತೆರವಾದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲು ನಿಖಿಲ್ ಅವರ ಆತ್ಮಸ್ಥೈರ್ಯ ಕುಗ್ಗಿಸಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದರೆ ಅವರು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಅವರು ಮಾತನಾಡುವ ಶೈಲಿ, ವಿರೋಧಿಗಳಿಗೆ ನೀಡುವ ಉತ್ತರ ನೋಡಿದರೆ ಖಂಡಿತ ಆ ಮೂರು ಸೋಲುಗಳು ಅವರಿಗೆ ಸಾಕಷ್ಟು ಅನುಭವ ತಂದುಕೊಟ್ಟಂತೆ ಕಾಣುತ್ತಿದೆ.
ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಕಂಗೆಡೆದ 50 ಲಕ್ಷ ಜನರೊಂದಿಗೆ ಸಂಪರ್ಕ ಸಾಧಿಸುವ ಹೊಸ ಕಾರ್ಯ ಜನರೊಂದಿಗೆ ಜನತಾದಳ ಕೈಗೆತ್ತಿಕೊಂಡಿದ್ದಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಗುರಿಯೊಂದಿದ್ದು ಆಗಸ್ಟ್-3 ರಂದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಸದ್ಯ ನಿಖಿಲ್ ಕುಮಾರಸ್ವಾಮಿ ಅವರ ಮುಖ್ಯ ಉದ್ದೇಶ ಎಂದರೆ ತಳಮಟ್ಟದಿಂದ ಜೆಡಿಎಸ್ ಪಕ್ಷ ಬಲಪಡಿಸುವುದು, ಮೂಲ ಮತ್ತು ಯುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಉತ್ಸಾಹ ತುಂಬುವ ಕಾರ್ಯ ಆದ್ಯತೆಯಾಗಿದೆ. ಈ ಮೂಲಕ ನಿಖಿಲ್ ಭರವಸೆಯ ಹೊಸ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.
ಜೆಡಿಎಸ್ ಪಕ್ಷ ಸ್ವಜಾತಿ ನಾಯಕರಲ್ಲದೆ ಅಹಿಂದ ಮತಗಳನ್ನು ಸೆಳೆಯಲು ಕಾರ್ಯ ತಂತ್ರ ರೂಪಿಸಬೇಕಾಗಿದೆ. ದೇವೇಗೌಡರು, ಕುಮಾರಸ್ವಾಮಿ ನಂತರ ಜೆಡಿಎಸ್ ಪಕ್ಷಕ್ಕೆ ಯಾವುದೇ ಉತ್ತರಾಧಿಕಾರಿ ಇಲ್ಲ ಎನ್ನುವ ಭಾವನೆಯನ್ನು ನಿಖಿಲ್ ಕುಮಾರಸ್ವಾಮಿ ಅಳಿಸಿ ಹಾಕಿದಂತೆ ಕಾಣುತ್ತಿದೆ. ಪಕ್ಷದ ಕಾರ್ಯ ತಂತ್ರ ಗಮನಿಸಿದರೆ ಮಲಗಿದ್ದ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಒಂದಿಷ್ಟು ಕೆಲಸಗಳನ್ನು ಪಕ್ಷ ನೀಡಿದೆ. ಹೊಸ ಹೊಸ ಪೀಳಿಗೆ ಯುವ ಸಮುದಾಯದೊಂದಿಗೆ ರಾಜ್ಯದಲ್ಲಿ ಬದಲಾವಣೆ ತರುವ ಕಾರ್ಯದಲ್ಲಿ ನಿಖಿಲ್ ಇದ್ದಂತೆ ಕಾಣುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಬಲಿಷ್ಠವಾಗಿ ಬೆಳೆಯಬೇಕೆಂಬ ಹಬ್ಬಯಕೆ ಇದ್ದಂತೆ ಕಾಣುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯದ ಮತದಾರರು ಓರ್ವ ಬಲಿಷ್ಠ ಪ್ರತಿಸ್ಪರ್ಧಿಯಂತೆ ನೋಡುತ್ತಾರೋ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ರಾಜ್ಯ ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿರುವ ನಿಖಿಲ್ ಅವರು ಜೆಡಿಎಸ್ ರಾಜ್ಯದಲ್ಲಿ ಮತ್ತೆ ಪುಟಿದೇಳುವಂತೆ ಮಾಡಲು ಮುಂದಾಗಿದ್ದಾರೆ. ಪಕ್ಷದ ಸಂಘಟನೆ ಹಾಗೂ ನಾಯಕತ್ವದ ಮುಖ್ಯ ಉದ್ದೇಶದೊಂದಿಗೆ ನಿಖಿಲ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದು ರಾಜಕೀಯವಾಗಿ ಬೆಳೆಯಲು ಅದ್ಬುತ ಅವಕಾಶ. ರಾಜಕೀಯ ಕುಟುಂಬದ ಹಿನ್ನೆಯೊಂದಿಗೆ ನಿಖಿಲ್ ಬಂದವರು. ಇತ್ತೀಚಿನ ಅವರ ಸಾರ್ವಜನಿಕ ಸಭೆ, ಸಮಾರಂಭದಲ್ಲಿನ ಭಾಷಣ,
ಎದುರಾಳಿಗಳಿಗೆ ನೀಡುತ್ತಿರುವ ಕೌಂಟರ್, ತಂತ್ರ-ಪ್ರತಿ ತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೂರು ಸೋಲುಗಳ ನಂತರ ನಿಖಿಲ್ ಒಂದಿಷ್ಟು ರಾಜಕೀಯವಾಗಿ ತರಬೇತಿ ಪಡೆದಂತೆ ಕಾಣುತ್ತಿದೆ. ಇನ್ನೂ ರಾಜಕೀಯ ಜೀವನದಲ್ಲಿ ಎದುರಾಗುವ ಪೆಟ್ಟು ಮತ್ತು ಪಟ್ಟುಗಳನ್ನು ಯಾವ ಸಂದರ್ಭದಲ್ಲಿ ಮಾಡಬೇಕು ಎಂಬ ಪಾಠ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತಿಳಿಸಿಕೊಟ್ಟಂತೆ ಕಾಣುತ್ತಿದೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ರಾಷ್ಟ್ರೀಯ ಪಕ್ಷಗಳಿಗಿಲ್ಲದ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ಜೆಡಿಎಸ್ ಸೋಲಲಿ, ಗೆಲ್ಲಲಿ ಎದೆಗುಂದದೆ ಕಾರ್ಯಕರ್ತರು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಇಂಥಹ ಕಾರ್ಯಕರ್ತರ ಪಡೆ ಇರುವುದರಿಂದಲೇ ಜೆಡಿಎಸ್ ರಾಜಕೀಯವಾಗಿ ತನ್ನ ಅಸ್ಮಿತೆ ಉಳಿಸಿಕೊಂಡಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಅಸ್ಮಿತೆ ಉಳಿಯಬೇಕಾದರೆ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯವಾಗಿ ನಾಯಕರಾಗಿ ಹೊರಹೊಮ್ಮಬೇಕಿದೆ. ಚಿಕ್ಕ ವಯಸ್ಸಿನ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯವಾಗಿ ಬೆಳೆಯಲು ಸಾಕಷ್ಟು ರೀತಿಯಲ್ಲಿ ಅನುಕೂಲಕರ ವಾತಾವರಣ ಇದೆ. ನಿಖಿಲ್ ಕುಮಾರಸ್ವಾಮಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಯುವಕರನ್ನು ಸೆಳೆಯಲು ಸಾಧ್ಯವಾಗಲಿದೆ.
ಹಿಂದೆ ಒಮ್ಮೆ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತನ್ನ ಸೋಲಿನ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾನು ಚುನಾವಣೆಯಲ್ಲಿ ಸೋತಿದ್ದೀನಿ ಅಷ್ಟೇ, ಆದರೆ ಸತ್ತಿಲ್ಲ, ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡುವುದುಬೇಡ, ಈ ರೀತಿಯ ಸೋಲುಗಳಿಂದ ನಾನು ಎದೆಗುಂದುವುದಿಲ್ಲ ಎಂದು ಎದುರಾಳಿಗಳಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದು ಉಂಟು.
36 ವರ್ಷ ವಯಸ್ಸಿನ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದ ಕಾರ್ಯಕರ್ತರಿಗೆ ಒಂದು ಭರವಸೆ ಮೂಡಿಸುತ್ತಿದ್ದು ಪಕ್ಷ ಸಂಘಟನೆಗೆ ನನ್ನನ್ನು ಬಳಸಿಕೊಳ್ಳಿ, ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡೋಣ, ನೀವು ಕೈಜೋಡಿಸಿ ಎಂದು ಕೋರಿಕೊಂಡಿದ್ದರು. ನಮ್ಮ ಪಕ್ಷದ ಆಧಾರ ಸ್ತಂಭಗಳೇ ನಿಷ್ಠಾವಂತ ಕಾರ್ಯಕರ್ತರುಗಳು, ನನ್ನ ಜೀವನವೇ ಹೋರಾಟ, ನಾನು ಸಮುದ್ರದ ಅಲೆಗಳ ವಿರುದ್ಧ ಈಜುವ ಅಭ್ಯಾಸ ಹೊಂದಿದ್ದೇನೆ.
ನಾನು ಎಂದಿಗೂ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ. ರಾಜ್ಯದ ಯುವ ಸಮುದಾಯದ ಪೀಳಿಗೆಗೆ ನನ್ನದೇ ಆದ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಶಯ. ಚುನಾವಣೆಯಲ್ಲಿ ಏಳು ಬೀಳು ಸರ್ವೆ ಸಾಮಾನ್ಯ ಎನ್ನುವ ಮೂಲಕ ನಿಖಿಲ್ ಕುಮಾರಸ್ವಾಮಿ ರಾಜಕೀಯ ಸೋಲುಗಳಿಗೆ ತಲೆ ಕೆಡಿಸಿಕೊಳ್ಳದೆ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕಾರ್ಯ ಮಾಡುತ್ತಿದ್ದಾರೆ. ರಾಜಕೀಯ ಲೆಕ್ಕಾಚಾರಗಳು ಮುಂದೆ ಏನಾಗುತ್ತವೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಕಾದು ನೋಡಬೇಕಿದೆ.

