ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ಸಿನ ಐದು ಗ್ಯಾರಂಟಿ ಯೋಜನೆಗಳ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಈ ಕುರಿತು ಘೋಷಣೆ ಮಾಡಿದ್ದರು. ಪ್ರತೀ ತಿಂಗಳು ಹಣವನ್ನು ವರ್ಗಾವಣೆ ಮಾಡುತ್ತೇವೆ ಕಟಾಕಟ್ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಈಗ ಕಟ್ ಕಟ್ ಮಾಡಿ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು.
ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯ ಸಂದರ್ಭಗಳಲ್ಲಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. 2 ಸಾವಿರ ಕೋಟಿ ರೂ. ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟು ಮಹಿಳೆಯ ಸಬಲೀಕರಣ ಮಾಡುತ್ತೇವೆ ಎಂದಿದ್ದರು. ಗೃಹಲಕ್ಷ್ಮಿ ಯೋಜನೆಯ ಹಣ ಕೆಲವು ತಿಂಗಳುಗಳಿಂದ ಬಿಡುಗಡೆಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಯಾವುದಾದರೂ ಚುನಾವಣೆ ಸಮೀಪಸಿದಾಗ ಮಾತ್ರ ಮ್ಯಾಜಿಕ್ ಆಗಿ ಹಣ ಜಮೆ ಆಗುತ್ತದೆ. ಮೂರು ಉಪಚುನಾವಣೆ ವೇಳೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ್ರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫಲಾನುಭವಿಗಳ ಸಭೆ ಕರೆದು ನೇರವಾಗಿ, ಡಿಸಿಎಂ ಸಹೋದರ ಬೆಂ.ಗ್ರಾಮಾಂತರದ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ರಾಮನಗರದಲ್ಲಿ ಕಾಂಗ್ರೆಸ್ಗೆ ಮತ ಹಾಕಿಲ್ಲವೆಂದರೆ ಗ್ಯಾರಂಟಿ ಹಣ ನಿಲ್ಲುತ್ತೆ ಅಂತ ಬೆದರಿಕೆ ಹಾಕಿದ್ದರು. ಆದರೆ ಇದಕ್ಕೆಲ್ಲ ಹೆದರದ ರಾಜ್ಯದ ಜನತೆ ಎನ್ ಡಿಎ ಮೈತ್ರಿ ಕೂಟಕ್ಕೆ 19 ಸಂಸದರನ್ನು ಗೆಲ್ಲಿಸಿದ್ದಾರೆ ಎಂದು ನಿಖಿಲ್ ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಘೋಷಣೆ ಮಾಡುವ ಮುನ್ನಾ ಇವರಿಗೆ ಅರಿವು ಇರಲಿಲ್ಲವೇ?. ಗೃಹಲಕ್ಷ್ಮಿ ಹಣ ತಲುಪುತ್ತಿಲ್ಲ ಅಂತ ಮಹಿಳೆಯರು ಹೇಳುತ್ತಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತರ ನೀಡಬೇಕು. ನುಡಿದಂತೆ ನಡೆಯುತ್ತೇವೆ ಅಂತ ಹೇಳ್ತೀರಿ. ಈಗ ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಉತ್ತರ ನೀಡಬೇಕು. ನಾನು ಕ್ಯಾಲೆಂಡರ್ ತೆಗೆದುಕೊಂಡು ಬರುತ್ತೇನೆ. ಯಾವತ್ತು ನೀವು ಹಣ ಬಿಡುಗಡೆ ಮಾಡ್ತೀರಿ ಎಂದು ಒಂದು ದಿನ ನಿಗದಿಪಡಿಸಿ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಆದರೆ ಕಾಂಗ್ರೆಸ್ ಸರ್ಕಾರ ಜನರಿಗೆ ಹಣ ಹಾಕದೆ ಮೋಸ ಮಾಡಿದರೆ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ಕಿಸಾನ್ ಯೋಜನೆ ಹಣ ಡಿಬಿಟಿ ಮೂಲಕ ನೇರವಾಗಿ ರೈತರಿಗೆ ತಲುಪುತ್ತಿದೆ. ಅದರಿಂದ ರಾಜ್ಯ ಸರ್ಕಾರಕ್ಕೆ ಕಮಿಷನ್ ತಪ್ಪಿರಬೇಕು. ಮೋದಿ ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಕಮಿಷನ್ ಬರುತ್ತಿಲ್ಲ ಎಂದು ನಿಖಿಲ್ ವ್ಯಂಗ್ಯವಾಡಿದರು.
5 ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಹೊರೆ ಆಗುತ್ತೆ ಎನ್ನುವ ಅರಿವು ಇಲ್ಲದೆ ಯಾಕೇ ಘೋಷಣೆ ಮಾಡಿದ್ರಿ? ಹಾಲಿನ ದರ, ನೀರಿನ ದರ ಹೆಚ್ಚು ಮಾಡುತ್ತಿದ್ದೀರಿ. ಪ್ರತಿನಿತ್ಯ ಬಳಸುವ ತೈಲದ ಬೆಲೆ ಜಾಸ್ತಿ ಮಾಡಿದ್ದೀರಿ. ಗುತ್ತಿಗೆದಾರರ ಪರಿಸ್ಥಿತಿ ಏನಾಗಿದೆ. ಇದೆಲ್ಲವೂ ಆಡಳಿತ ವಿಫಲತೆ ಅಲ್ಲವೇ?” ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಮಾರ್ಚ್ 3 ರಂದು ಸೋಮವಾರದಿಂದ ಬಜೆಟ್ ಅಧಿವೇಶನ ಕರಿದ್ದಾರೆ. ನನ್ನದು ಒಂದೇ ಪ್ರಶ್ನೆ, ಐದು ಗ್ಯಾರಂಟಿ ಯೋಜನೆಗಳ ಹಣ ಯಾವಾಗ ಹಾಕ್ತೀರಾ ಅಂತ ದಿನಾಂಕ ನಿಗದಿ ಮಾಡಿ. ನಾವು ಯಾರು ಕೇಳಲ್ಲ. ನೀವೆ ಆಡಳಿತ ನಡೆಸೋರು ಹೇಳಿ ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮೈಸೂರಿನ ಉದಯಗಿರಿ ಘಟನೆ ಪೂರ್ವನಿಯೋಜಿತ. ಯಾವುದೇ ಸಮುದಾಯ ತಪ್ಪು ಮಾಡಿದ ಸಂದರ್ಭದಲ್ಲಿ ಪಾರದರ್ಶಕವಾದ ಆಡಳಿತ ಕೊಡೋದು ಸರ್ಕಾರದ ಜವಾಬ್ದಾರಿ. ಪೊಲೀಸರಿಗೆ ರಕ್ಷಣೆ ಕೊಡುವುದು ಸರ್ಕಾರದ ಕೆಲಸ. ಮೊದಲೇ ಕಲ್ಲು ಸಂಗ್ರಹ ಮಾಡಿ ದಾಳಿ ಮಾಡ್ತಾರೆ ಅಂದರೆ, ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ. ಇದು ಪೂರ್ವ ನಿಯೋಜಿತ ಗಲಾಟೆ. ಪೊಲೀಸರಿಗೆ ರಕ್ಷಣೆ ಇಲ್ಲವೆಂದರೆ ಜನ ಸಾಮಾನ್ಯರ ಗತಿ ಏನು? ಎಂದು ಅವರು ಪ್ರಶ್ನಿಸಿದರು. ಇನ್ನೂ ಭದ್ರಾವತಿಯ ಶಾಸಕರ ಮಗ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಪೊಲೀಸ್ ವರ್ಗಾವಣೆ ದಂದೆ ನಡೆಯುತ್ತಿದೆ. ಆಡಿಯೋ ಸಿಕ್ಕಿದೆ, ಎಫ್ಎಸ್ಎಲ್ ವರದಿ ಮಾಡಿಸಿದ್ರಾ? ಮುಚ್ಚಿಹಾಕಿದ್ರಿ. ಸದನದ ಅತ್ಯಂತ ಪ್ರಬಾವಿ ಮಂತ್ರಿ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲ ಎಲ್ಲೆಲ್ಲಿ ಸುತ್ತಾಡಿಸಿದ್ರಿ? ಪಾರದರ್ಶಕವಾಗಿ ತನಿಖೆ ಅಂತ ಏನು ಮಾಡಿದ್ರಿ? ಭದ್ರಾವತಿ ಪ್ರಕರಣದಲ್ಲಿ ಯಾಕೆ ಪಾರದರ್ಶಕತೆ ತೋರಿಸಿಲ್ಲ. ಮೊನ್ನೆ ಮಡಿಕೇರಿಯಲ್ಲಿ ಕಾಂಗ್ರೆಸ್ ಶಾಸಕ ಆಪ್ತ ಎಂದು ಬೆದರಿಕೆ ಹಾಕಿದ್ದಾನೆ. ಅದರಲ್ಲಿ ಏನು ಮಾಡಿದ್ರಿ. ಗೃಹ ಸಚಿವರು ಅಸಹಾಯಕರಾಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಆಡಳಿತ ರೂಢ ಕಾಂಗ್ರೆಸ್ ಸರ್ಕಾರಕ್ಕೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ ನಡೆಸುತ್ತಾರೆ ಎಂಬುದು ಗೊತ್ತಿಲ್ಲ. ಜನ ಯಾವುದಾದರೂ ಚುನಾವಣೆ ಬರಲಿ ಅಂತ ಮೈಂಡ್ಸೆಟ್ ಮಾಡಿಕೊಂಡಿದ್ದಾರೆ. ಆಗ ಗ್ಯಾರಂಟಿ ಹಣ ಬಿಡುಗಡೆ ಮಾಡ್ತಾರೆ ಅಂತ ಜನ ಚಿಂತನೆ ಮಾಡುತ್ತಿದ್ದಾರೆ. ಗ್ಯಾರಂಟಿ ಹಣವನ್ನು ಬಿಡುಗಡೆ ಮಾಡ್ತೀರಾ, ಇಲ್ಲವಾದರೆ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಅವರು ಎಚ್ಚರಿಸಿದರು.
ರಾಜ್ಯದ ಮಹಿಳೆಯರಿಗೆ ಮೋಸ ಮಾಡಬೇಡಿ, ಬಿಜೆಪಿ- ಜೆಡಿಎಸ್ ನಿಮ್ಮ ಜೊತೆ ಇರುತ್ತದೆ. ನೀವು ಹಣ ಬಿಡುಗಡೆ ಮಾಡಬೇಕು. ಹಣ ಇದೆಯಾ ಇಲ್ಲವೇ ಎಂಬುದನ್ನು ಸರ್ಕಾರ ಹೇಳಬೇಕು. ಕರ್ನಾಟಕ ರಾಜ್ಯ ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ಶಾಸಕರನ್ನು ಗೆಲ್ಲಿಸಿ ಜನರು ಅಧಿಕಾರ ಕೊಟ್ಟಿದ್ದಾರೆ ಎನ್ನುವುದನ್ನ ಕಾಂಗ್ರೆಸ್ ಮರೆಯಬಾರದು ಎಂದು ಅವರು ಹೇಳಿದರು.
ಕೇತಗಾನಹಳ್ಳಿ ಜಮೀನು ಸರ್ವೇ ವಿಚಾರಕ್ಕೆ ಪ್ರತಿಕ್ರಿಯಿಸಿ ನಿಖಿಲ್ ಅವರು, ಇದು ಏನು ಹೊಸದಲ್ಲ. ಹಲವಾರು ಸರ್ಕಾರ ಕುಮಾರಣ್ಣರನ್ನು ಕಟ್ಟಿ ಹಾಕುವುದಕ್ಕೆ ಪ್ರಯತ್ನಿಸುತ್ತಿವೆ. ನಾನು ಹಲವಾರು ಜಿಲ್ಲೆಗಳ ಪ್ರವಾಸ ಕೈಗೊಂಡ ವೇಳೆ ಹೇಳಿದ್ದೇನೆ. 1985ರಲ್ಲಿಈ ಜಮೀನು ಖರೀದಿ ಆಗಿದೆ. ಜಮೀನಿನ ಮಾಲೀಕರು ಯಾರು ಕೂಡ 40 ವರ್ಷದಿಂದ ಅನ್ಯಾಯ ಆಗಿದೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ನವರು ಹೊಸದಾಗಿ ಮೊನ್ನೆ ಪ್ರಾರಂಭ ಮಾಡಿದ್ದಾರೆ. ಅವರೇ ಕೆಲವರನ್ನು ಕಳಿಸಿ ಆರೋಪ ಮಾಡಿಸಿದ್ದಾರೆ. 40 ವರ್ಷದಿಂದ ಇಲ್ಲದ್ದು ಈಗ ಆರೋಪಮಾಡ್ತಿದ್ದಾರೆ. ಯಾರು ನಾಲ್ಕು ಜನರು ಮೀಡಿಯಾ ಮುಂದೆ ಮಾತಾಡ್ತಿದ್ದಾರೆ. ಎಲ್ಲದಕ್ಕೂ ಕಾಲ ಉತ್ತರಕೊಡುತ್ತದೆ ಎಂದು ನಿಖಿಲ್ ತಿಳಿಸಿದರು.
ಯಾವುದೇ ವ್ಯಕ್ತಿಗೆ ತಪ್ಪು ಮಾಡಿದಾಗ ಆತಂಕ ಇರುತ್ತದೆ. ಕುಮಾರಣ್ಣ ಯಾರದ್ದೇ ಒಂದು ರೂಪಾಯಿ ತೆಗೆದುಕೊಂಡಿಲ್ಲ. ಕುಮಾರಣ್ಣ ಅವರಿಗೆ ಯಾವುದೇ ಆತಂಕ ಇಲ್ಲ, ಅವರು ಅತ್ಯಂತ ಪಾರದರ್ಶಕವಾಗಿದ್ದಾರೆ ಎಂದು ಹೇಳಿದರು.
ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಸ್‌ಐಟಿ ವರದಿ ಸಲ್ಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್ ಅವರು, ದ್ವೇಷ ರಾಜಕಾರಣ ಎನ್ನುವುದಕ್ಕೆ ಗ್ರಾಫ್ ಇತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದ್ವೇಷ ರಾಜಕಾರಣದ ಗ್ರಾಫ್ಗೆ ಇತಿ ಮಿತಿ ಇಲ್ಲ. ರಾಜ್ಯದಲ್ಲಿ ದ್ವೇಷ ರಾಜಕಾರಣಕ್ಕೆಬೀಜ ಬಿತ್ತಿದ್ದೆ ಕಾಂಗ್ರೆಸ್. ಎಲ್ಲಿ ಕುಮಾರಣ್ಣ ಕಾಂಗ್ರೆಸ್ನ ಭ್ರಷ್ಟಾಚಾರ ಹಗರಣ ಬಯಲಿಗೆ ಎಳೆಯುತ್ತಾರೋ ಎನ್ನುವುದನ್ನು ಅವರಿಗೆ ಸಹಿಸಲು ಆಗ್ತಿಲ್ಲ. ಅವರ ವರ್ಚಸ್ಸು ಕುಗ್ಗಿಸುವ ಕೆಲಸ ಮಾಡ್ತಿದ್ದಾರೆ. ಕುಮಾರಣ್ಣ ಅವರ ಪರವಾಗಿ ನಾನು ಹೇಳುತ್ತೇನೆ, ಕುಮಾರಣ್ಣ ಆತ್ಮಸಾಕ್ಷಿಯಾಗಿಕೆಲಸ ಮಾಡಿದ್ದಾರೆ. ಎದುರಿಸುವ ಸಾಮರ್ಥ್ಯ ನಮಗಿದೆ. ನೈತಿಕತೆ ಇಟ್ಟುಕೊಂಡಿದ್ದೇವೆ, ಇದನ್ನು ಕಾನೂನು ಮೂಲಕ ಎದುರಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲ್ ಹಾಕಿದರು.