ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆತ್ಮೀಯರೇ, ಧರ್ಮಸ್ಥಳ ಸತ್ಯ ಯಾತ್ರೆಯ ನಂತರ ಕೆಲವರು ನನಗೆ ವೈಯಕ್ತಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂದೇಶಗಳನ್ನು ಕಳುಹಿಸಿದ್ದೀರಿ.
ಕು. ಸೌಜನ್ಯ ಗೌಡಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯವೂ ಹೌದು, ಜವಾಬ್ದಾರಿಯೂ ಹೌದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷದಿಂದಾಗಲಿ, ಸಿದ್ಧಾತದಿಂದಾಗಲಿ, ಬೀದಿ ಹೋರಾಟಗಳಿಂದಾಗಲಿ, ಯೂಟ್ಯೂಬ್ ವಿಡಿಯೋಗಳಿಂದಾಗಲಿ ಅಥವಾ ನ್ಯೂಸ್ ಚಾನಲ್ ಗಳ ಡಿಬೆಟ್ ಗಳಿಂದಾಗಲಿ ನ್ಯಾಯ ಸಿಗುವುದಿಲ್ಲ. ಈ ದೇಶದ ನ್ಯಾಯಾಂಗದಿಂದಲೇ ಅಪರಾಧಿಯನ್ನು ಶಿಕ್ಷಿಸಬೇಕು ಮತ್ತು ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕು. ಸೌಜನ್ಯ ಗೌಡ ಅವರಿಗೆ ನ್ಯಾಯ ಸಿಗಬೇಕಾದರೆ, ಅವರ ತಾಯಿ ಅಥವಾ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್ ನಲ್ಲಿ ಮರು ತನಿಖೆಗಾಗಿ ಅರ್ಜಿ ಸಲ್ಲಿಸಬೇಕು. ಇತ್ತೀಚಿನ ದಿನಗಳಲ್ಲಿ ಕೆಲವರು ಸೌಜನ್ಯ ಗೌಡ ಸಾವಿಗೆ ಸಂಬಂಧಿಸಿದಂತೆ ಸಾಕ್ಷಿಗಳಿವೆ ಎಂದು ಹೇಳುತ್ತಿದ್ದಾರೆ. ಈ ಸಾಕ್ಷಿಗಳನ್ನು ಕೂಡ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಅರ್ಜಿಯಲ್ಲಿ ಸಲ್ಲಿಸಿದರೇ ಸುಪ್ರೀಂ ಕೋರ್ಟ್‌ಮರು ತನಿಖೆಗೆ ಆದೇಶಿಸಲು ಸಹಕಾರಿಯಾಗಲಿದೆ. ಸುಪ್ರೀಂ ಕೋರ್ಟ್‌ಈ ತನಿಖೆಯನ್ನು ಯಾವುದಾದರೂ ತನಿಖಾ ಸಂಸ್ಥೆ ಅಥವಾ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.
ಸೌಜನ್ಯ ಗೌಡ ತಾಯಿ ಅಥವಾ ಅವರ ಕುಟುಂಬ ವರ್ಗದವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ನಿರೀಕ್ಷೆಯಲ್ಲಿ ನೀವೆಲ್ಲರೂ ಇದ್ದಂತೆ ನಾನೂ ಕೂಡ ಇದ್ದೇನೆ ಎಂದು ನಿಖಿಲ್ ತಿಳಿಸಿದರು.

