ಚಂದ್ರವಳ್ಳಿ ನ್ಯೂಸ್, ತುಮಕೂರು:
ಕಾಂಗ್ರೆಸ್ನವರು ವಿಧಾನಸಭಾ ಚುನಾವಣೆಗೂ ಮುಂಚೆ save Nandini ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ದೊಡ್ಡ ಹೋರಾಟ ಮಾಡಿದ್ದರು. ಆದರೆ, ಈಗ ಕಮಿಷನ್ ಆಸೆಗಾಗಿ ಅಮೂಲ್ ಅನ್ನು ಗುತ್ತಿಗೆ ಕೊಡುವಂತಹ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ತುಮಕೂರಿನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಹಿಂದೆ ಬಿಜೆಪಿ ಸರ್ಕಾರದ ಆಡಳಿತ ಇದ್ದಾಗ ನಂದಿನಿ ಉಳಿಸಬೇಕು ಅಂತ ಸೇವ್ ನಂದಿನಿ ಎಂಬ ಹ್ಯಾಶ್ ಟ್ಯಾಗ್ ಬಳಸಿ, ಕೈನಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ಫೋಟೋಗೆ ಪೋಸ್ ಕೊಟ್ಟ ಹಾಗಲ್ಲ. ನಮ್ಮ ನಂದಿನಿಯನ್ನು ಉಳಿಸಬೇಕು. ಇವತ್ತು ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ನವರು ನಮ್ಮ ಹೆಮ್ಮೆಯ ನಂದಿನಿಯನ್ನು ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.
ಇಂದು ಕಾಂಗ್ರೆಸ್ ನವರು ಅಮೂಲ್ ಸೇರಿದಂತೆ ಬೇರೆ ಬೇರೆಯವರಿಗೆ ಗುತ್ತಿಗೆ ಕೊಡುವಂತಹ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಉಪ ಮುಖ್ಯಮಂತ್ರಿಗಳ ತಮ್ಮ ಬಮೂಲ್ ಅಧ್ಯಕ್ಷ ಆಗಿದ್ದಾರಲ್ಲ, ಅವರೇ ಉತ್ತರ ಕೊಡ್ಬೇಕು ಎಂದು ನಿಖಿಲ್ ಆಗ್ರಹ ಮಾಡಿದರು.
ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಆಗಲಿ ಯಾವುದೇ ಯಾತ್ರೆ ಆಗಲಿ, ಕೆಲವೊಮ್ಮೆ ಬೇರೆ ಬೇರೆ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕಾಗುತ್ತದೆ. ಸೂಕ್ತವಾದಂತಹ ಸಮಯ ಸಂದರ್ಭಗಳು ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಜನತೆಗೆ ಅಭಿವೃದ್ಧಿಯಲ್ಲಿ ಆಗಿರುವ ಹಿನ್ನಡೆ, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಹಗರಣ ಇವನ್ನೆಲ್ಲಾ ಮುಂದೆ ಇಟ್ಟುಕೊಂಡು ಜನಗಳ ಮುಂದೆ ಇಟ್ಟು ಎಚ್ಚರಿಸುವಂತಹ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಸರ್ಕಾರ ಬಂದರೆ ಕರ್ನಾಟಕ ಹೆಚ್ಚು ಸಾಲಗಾರ ಆಗೋದ್ರಲ್ಲಿ ಯಾವುದೇ ಸಂಶಯ ಇಲ್ಲ ಎಂದು ನಿಖಿಲ್ ವಾಗ್ದಾಳಿ ಮಾಡಿದರು.
ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಬೀದಿಗೆ ಇಳಿಯುತ್ತೇವೆ. ನಮ್ಮದು ಮನೆಯಲ್ಲಿ ಕುಳಿತು ರಾಜಕಾರಣ ಮಾಡುವ ಪಕ್ಷ ಅಲ್ಲ. ಹಳ್ಳಿ ಹಳ್ಳಿಗೂ ಹೋಗುತ್ತೇವೆ, ಪ್ರತಿ ಕನ್ನಡಿಗನ ತಲುಪುತ್ತೇವೆ. ಎಲ್ಲಾ ಸಮುದಾಯಗಳನ್ನು ಜಾತ್ಯತೀತ ಮನೋಭಾವದಿಂದ ಒಪ್ಪಿಕೊಂಡಾಗಿದೆ, ಅಪ್ಪಿಕೊಂಡಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.