ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಮಿಡಿದಿರುವ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ರಾಜ್ಯದ ಸಮಸ್ತ ರೈತ ಬಂಧುಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಕೇಂದ್ರದಿಂದ ನೆರವು ಪಡೆಯುವ ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮ ಜತೆ ಹೆಗಲಾಗಿ ನಿಂತು ಮಾರ್ಗದರ್ಶನ ನೀಡಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಗೆ ಧನ್ಯವಾದಗಳನ್ನು ನಿಖಿಲ್ ಸಲ್ಲಿಸಿದ್ದಾರೆ.
ತಂಬಾಕು ಮಾರಾಟದ ಮೇಲಿನ ನಿರ್ಬಂಧ ಸಡಿಲಿಕೆ ಸೇರಿದಂತೆ ಕೇಂದ್ರದ ಸಕಾಲಿಕವಾಗಿ ಕೈಗೊಂಡಿರುವ ಕ್ರಮದಿಂದ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಬೆಳೆಗಾರರಿಗೆ ಶಕ್ತಿ ತುಂಬಲಿದೆ.
ರಾಜ್ಯದ 53,325 ಹೆಕ್ಟೇರ್ ಪ್ರದೇಶದಲ್ಲಿ ಎಫ್‌ಸಿವಿ ತಂಬಾಕು ಬೆಳೆಯಲಾಗುತ್ತಿದೆ. 40,487 ನೋಂದಾಯಿತ ಹಾಗೂ 12,838 ಪರವಾನಗಿ ರಹಿತ ಬೆಳೆಗಾರರು ಇದ್ದು, ಬೆಳೆಯುತ್ತಿದ್ದಾರೆ. ಇವರೆಲ್ಲರಿಗೂ ಕೇಂದ್ರದ ನಿರ್ಧಾರದಿಂದ ಅನುಕೂಲ ಆಗಲಿದೆ. ನರೇಂದ್ರ ಮೋದಿ ಅವರ ಸರಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಹೇಳಲು ಬಯಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.