ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವರನಟ ಡಾ.ರಾಜಕುಮಾರ್ ಪುತ್ರಿ ಲಕ್ಷ್ಮಿ ಹಾಗೂ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜ್ ಅಭಿನಯದ ನಿಂಬಿಯಾ ಬನಾದ ಮ್ಯಾಗ ಚಿತ್ರದ ಪಾರ್ಟ್-1 ಏಪ್ರಿಲ್ ತಿಂಗಳ 4 ರಂದು ಬಿಡುಗಡೆ ಆಗಲಿದೆ ಎಂದು ನಾಟಕ ನಟ ಷಣ್ಮುಖ ಗೋವಿಂದರಾಜ್ ತಿಳಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ನಿಂಬಿಯಾ ಬನಾದ ಮ್ಯಾಗ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಏಪ್ರಿಲ್ 4 ರಂದು ಚಿತ್ರ ಬಿಡುಗಡೆಯಾಗಲಿದೆ. ನಿಂಬಿಯಾ ಬನಾದ ಮ್ಯಾಗ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾದ ಶೇಕಡ 70 ಭಾಗ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ ಎಂದು ಅವರು ತಿಳಿಸಿದರು.
ನಿಂಬಿಯಾ ಬನಾದ ಮ್ಯಾಗ ಸಿನಿಮಾಗೆ ಅಶೋಕ್‌ಕಡಬ ನಿರ್ದೇಶನ ಮಾಡಿದ್ದಾರೆ. ನಾಯಕ ನಟರಾಗಿ ಷಣ್ಮುಖ ಗೋವಿಂದರಾಜ್ ಅಭಿನಯದ ಚೊಚ್ಚಲ ಚಿತ್ರ ‘ನಿಂಬಿಯಾ ಬನಾದ ಮ್ಯಾಗ‘. ಈ ಸಿನಿಮಾಗೆ ನಿರ್ದೇಶಕ ಕಡಬ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾಕ್ಕೆ ‘ನಿಂಬಿಯಾ ಬನಾದ ಮ್ಯಾಗ‘ ಹೆಸರು ವಿಭಿನ್ನವಾಗಿರಲೆಂದು ಆ ಹೆಸರಿಡಲಾಗಿದೆ ಎಂದರು.
‘ಸತ್ಯಂ‘ ಎಂಬ ಸಿನಿಮಾವನ್ನು ಅಶೋಕ್‌ಕಡಬ ನಿರ್ದೇಶನ ಮಾಡಿದ್ದು, ಅದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಎನ್ನಲಾಗಿದೆ. ಅದು ತೆರೆಗೆ ಬರುವ ಮುನ್ನವೇ ಈಗ ‘ನಿಂಬಿಯಾ ಬನಾದ ಮ್ಯಾಗ‘ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ.
ಚಿತ್ರದ ನಿರ್ದೇಶಕ ಅಶೋಕ್ ಕಡಬ ಅವರು ಮಾತನಾಡಿ ಕಥೆ ತುಂಬಾ ಚನ್ನಾಗಿದೆ. ಈ ಕಥೆಯನ್ನು ರಾಜ್ ಕುಟುಂಬದ ಎಲ್ಲರೂ ಮೆಚ್ಚಿಕೊಂಡೇ ಒಪ್ಪಿಗೆ ಸೂಚಿಸಿದ್ದಾರೆ. 5 ವರ್ಷದನಿದ್ದಾಗ ತಾಯಿಂದ ದೂರಾಗುವ ಪುತ್ರ 25 ವರ್ಷಗಳ ನಂತರ ಅಮ್ಮನ ಮಡಿಲು ಸೇರುತ್ತಾನೆ. ಇದರ ಮಧ್ಯ ಸಾಗುವ ಕಥೆ ಅದ್ಭುತವಾಗಿದೆ ಎಂದು ಅವರು ತಿಳಿಸಿದರು.
ಚಿತ್ರ ನಿರ್ಮಾಪಕ ಹಾಗೂ ಮಾಜಿ ನಗರಸಭಾಧ್ಯಕ್ಷ, ಜೆಡಿಎಸ್ ಮುಖಂಡ ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗಕ್ಕೂ ಡಾ.ರಾಜ್ ಕುಟುಂಬಕ್ಕೆ ಬಿಡಿಸಲಾಗದ ನಂಟು. ಡಾ.ರಾಜ್ ಮೊಮ್ಮಗ ಷಣ್ಮುಖ ಈ ಕಥೆ ಮತ್ತು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.
ಅಮ್ಮ- ಮಗನ ಭಾವನಾತ್ಮಕ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದ ಕಥೆಯು ಮಲೆನಾಡು ಭಾಗದಲ್ಲಿ ನಡೆಯುತ್ತದೆ. ಎರಡು ಹಂತಗಳಲ್ಲಿ ಬೆಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಹಿರಿಯ ನಟಿ ಭವ್ಯಾ, ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮುಂತಾದವರು ಬಣ್ಣ ಹಚ್ಚಿರುವ ಈ ಸಿನಿಮಾದಲ್ಲಿ ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಕೂಡ ನಟಿಸಿದ್ದಾರೆ. ನಾಯಕ ನಟ ಷಣ್ಮುಖ ಗೋವಿಂದ್ ರಾಜ್, ತನುಶ್ರೀ, ಸುನದ್ ರಾಜ್, ಸಂಗೀತಾ, ಪದ್ಮಾ ವಾಸಂತಿ, ರಾಮಕೃಷ್ಣ, ಮುಗು ಸುರೇಶ್, ಸಂದೀಪ್ ಮಲಾನಿ, ತ್ರಿಷಾ ಮತ್ತಿತರರು ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದರು.
ನಿಂಬಿಯಾ ಬನಾದ ಮ್ಯಾಗ ಸಿನಿಮಾವನ್ನು ಎಮ್‌ಜಿಪಿಎಕ್ಸ್ ಎಂಟರ್‌ಪ್ರೈಸಸ್ ಬ್ಯಾನರ್‌ಅಡಿಯಲ್ಲಿ ವಿ ಮಾದೇಶ್ ನಿರ್ಮಿಸಿದ್ದಾರೆ ಎಂದು ಅವರು ತಿಳಿಸಿದರು.
ಪ್ರೇಕ್ಷಕರು ಹೊಸಬರ ಚಿತ್ರ ನೋಡಿ ಆಶೀರ್ವಾದಿಸಬೇಕು, ಕನ್ನಡ ಚಿತ್ರರಂಗ ಗಟ್ಟಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಸಂಗೀತ : ಆರೋನ್ ಕಾರ್ತಿ & ಪ್ರವೀಣ್ ಶ್ರೀನಿ, ಛಾಯಾಗ್ರಹಣ: ಸಿದ್ದು ಕಂಚನಹಳ್ಳಿ, ಹಿನ್ನಲೆ ಸಂಗೀತ : ಪಳನಿ ಡಿ. ಸೇನಾಪತಿ, ನೃತ್ಯ:ಮದನ್ ಹರಿಣಿ ತಾಂತ್ರಿಕ ವರ್ಗದಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ವಿ.ಮಾದೇಶ್, ಸುನಾದ್ ರಾಜ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.