ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನಿರ್ಮಿತಿ ಕೇಂದ್ರಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವುಗಳನ್ನು ‘ಸರ್ಕಾರದ ಘಟಕ‘ ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಬಾಗಲಕೋಟೆಯ ನಿರ್ಮಿತಿ ಕೇಂದ್ರವನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕಾಯಿದೆ ಅಡಿಯಲ್ಲಿ ಹೊಣೆಗಾರರಾಗುವಂತೆ ಕೇಂದ್ರ ಅಬಕಾರಿ ತೆರಿಗೆ ಆಯುಕ್ತರು ಹೊರಡಿಸಿದ್ದ ನೋಟಿಸ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಬಾಗಲಕೋಟೆ ನಿರ್ಮಿತಿ ಕೇಂದ್ರವನ್ನು ಜಿಎಸ್ಟಿ ಹೊಣೆಗಾರಿಕೆ ಹೊರುವಂತೆ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದ ಅಬಕಾರಿ ಆಯುಕ್ತರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಈ ಸಂಬಂಧ ಅಬಕಾರಿ ಆಯುಕ್ತರು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿ ಆದೇಶಿಸಿದ್ದು, ನಿರ್ಮಿತಿ ಕೇಂದ್ರವನ್ನು ಸರ್ಕಾರಿ ಘಟಕ ಅಲ್ಲ ಎಂಬುದಾಗಿ ತಿಳಿಸಿದ್ದ ಸಹಾಯಕ ಅಬಕಾರಿ ತೆರಿಗೆ ಆಯುಕ್ತರ ಕ್ರಮ ದೋಷದಿಂದ ಕೂಡಿದೆ ಎಂದು ಪೀಠ ಹೇಳಿದೆ.
ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಅಧಿಕಾರಿಗಳು ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಜಿಲ್ಲಾ ಪಂಚಾಯತ್ ಉಪ ಅಭಿವೃದ್ಧಿ ಕಾರ್ಯದರ್ಶಿಗಳು, ಕಾರ್ಯನಿರ್ವಾಹ ಅಭಿಯಂತರರು, ಜಿಲ್ಲಾ ಕಲ್ಯಾಣ ಅಧಿಕಾರಿ, ಮುಖ್ಯ ಯೋಜನಾ ಅಧಿಕಾರಿಗಳು ಇರಲಿದ್ದಾರೆ. ಹೀಗಾಗಿ ಈ ಸಂಸ್ಥೆ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿರಲಿದೆ ಎಂಬ ಅಂಶ ತಿಳಿಯಲಿದೆ ಎಂದು ಪೀಠವು ತಿಳಿಸಿದೆ.
ನಿರ್ಮಿತಿ ಕೇಂದ್ರಕ್ಕೆ ಕಾರ್ಪೋರೇಟ್ ಸಂಸ್ಥೆಗಳು, ಬ್ಯಾಂಕುಗಳು ಸೇರಿದಂತೆ ಇತರೆ ಹಣಕಾಸು ಸಂಸ್ಥೆಗಳಿಂದ ಅನುದಾನ ಮತ್ತು ನೆರವಿನ ಮೂಲಕ ಹಣಕಾಸು ಲಭ್ಯವಾಗುತ್ತದೆ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಲಿದೆ. ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ಕೆಂದ್ರ ಸರ್ಕಾರವು ಕೆಲವು ಘಟಕಗಳಿಗೆ ತೆರಿಗೆ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರವು ಅಧಿಸೂಚನೆ ಮೂಲಕ ನಿರ್ಮಿತಿ ಕೇಂದ್ರವನ್ನು ಸರ್ಕಾರದ ಘಟಕ ಎಂಬುದಾಗಿ ತಿಳಿಸಿದೆ ಎಂದು ಪೀಠ ತಿಳಿಸಿದೆ.
ಏನಿದು ಪ್ರಕರಣ:
ಬಾಗಲಕೋಟೆ ನಿರ್ಮಿತಿ ಕೇಂದ್ರ ಕರ್ನಾಟಕ ಸೊಸೈಟಿ ಕಾಯಿದೆಯಡಿಯಲ್ಲಿ ನೋಂದಣಿಯಾಗಿದ್ದು, ಸರ್ಕಾರದ ಆದೇಶದಂತೆ ಸ್ಥಾಪನೆಯಾಗಿ, ಸರ್ಕಾರಿ ಅಂಗಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ನಿಗಮ ಸೂಚಿಸಿರುವ ಯೋಜನೆಯ ಮುಂದುವರಿಕೆಯ ಕಾರ್ಯಕ್ರಮದ ಯೋಜನೆಯಡಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿವಿಲ್ ಕಾಮಗಾರಿಗಳ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯ ನಿಯಮ ಮತ್ತು ನಿಯಂತ್ರಣ ರಾಜ್ಯ ಸರ್ಕಾರದಿಂದ ಪಡೆದುಕೊಂಡಿರಲಿದೆ.
ಈ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ನೀಡಿ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ 2017ರ ಜೂನ್ 26ರಂದು ಅಧಿಸೂಚನೆ ಹೊರಡಿಸಿದೆ. ಜೊತೆಗೆ, 2017ರ ಅಕ್ಟೊಬರ್ 13ರಂದು ರಾಜ್ಯ ಸರ್ಕಾರ ಈ ಸಂಸ್ಥೆಯನ್ನು ಸರ್ಕಾರದ ಘಟಕ ಎಂಬುದಾಗಿ ತಿದ್ದುಪಡಿ ಮಾಡಿದೆ.
ಈ ನಡುವೆ, ಅರ್ಜಿದಾರ ಸಂಸ್ಥೆಯಾಗಿರುವ ನಿರ್ಮಿತಿ ಕೇಂದ್ರದಕ್ಕೆ ಸಂಬಂಧಿಸಿದಂತೆ 2017ರ ಜುಲೈ ಮತ್ತು 2018ರ ಮಾರ್ಚ್ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಅಬಕಾರಿ ತೆರಿಗೆ ಆಯುಕ್ತರು ಲೆಕ್ಕ ಪರಿಶೋಧನೆ ನಡೆಸಿದ್ದರು. ಬಳಿಕ ಕೇಂದ್ರ ಅಬಕಾರಿ ಆಯುಕ್ತರು ಈ ಅವಧಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಸಲ್ಲಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಿದ್ದರು.
2020ರ ಸೆಪ್ಟೆಂಬರ್ 14ರಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಅಬಕಾರಿ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ಗೆ ಉತ್ತರವನ್ನೂ ನೀಡಲಾಗಿತ್ತು. ನಂತರ ಅಬಕಾರಿ ಇಲಾಖೆ ನಿರ್ಮಿತಿ ಕೇಂದ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ, ಮತ್ತೊಂದು ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಅರ್ಜಿದಾರರ ಸಂಸ್ಥೆಯು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದ್ದು, ಸರ್ಕಾರಿ ಘಟಕವಾಗಿದೆ ಎಂಬುದಾಗಿ ತಿಳಿಸಿ ವಿವರವಾದ ಇ-ಮೇಲ್ ಮೂಲಕ ಉತ್ತರಿಸಿದ್ದರು.
ಆದರೂ ಕೇಂದ್ರ ಸಹಾಯಕ ಅಬಕಾರಿ ತೆರಿಗೆ ಆಯುಕ್ತರು, ರಾಜ್ಯದ ಇತರೆ ನಿರ್ಮಿತಿ ಕೇಂದ್ರಗಳು ಜಿಎಸ್ಟಿ ನಿಯಮಗಳನ್ನು ಪಾಲಿಸುತ್ತಿದ್ದು, ಬಾಗಲಕೋಟೆಯ ನಿರ್ಮಿತಿ ಕೇಂದ್ರವೂ ಅದನ್ನು ಅನುಸರಿಸಬೇಕು. ಅಲ್ಲದೆ, ಈ ಕೇಂದ್ರವನ್ನು ಸರ್ಕಾರದ ಘಟಕ ಎಂದು ಘೋಷಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ 2021ರ ಆಗಸ್ಟ್ 17ರಂದು ಬಾಗಲಕೋಟೆಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.

