ಎಲ್ಲಾ ಜಾತಿಯವರಿಗೂ ಸೊಸೈಟಿಯಲ್ಲಿ ಅವಕಾಶ- ನಿಶಾನಿ ಜಯಣ್ಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಜಾತಿಯವರಿಗೂ ಸೊಸೈಟಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.

ಐದನೆ ಬಾರಿಗೆ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಎಂ.ನಿಶಾನಿ ಜಯಣ್ಣ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ೧೯೧೨ ರಲ್ಲಿ ತಿರುಮಲಾಚಾರ್ಯರು ಸ್ಥಾಪಿಸಿದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಿಟ್ಟೂರು ಶ್ರೀನಿವಾಸ್ ಅಯ್ಯಂಗಾರ್, ಎಸ್.ನಿಜಲಿಂಗಪ್ಪ, ಭೀಮಪ್ಪನಾಯಕ, ಜಾಫರ್‌ಷರೀಫ್, ಪೀರ್‌ಸಾಬ್, ಬೋಜರಾಜು, ಪಟೇಲ್ ಚಂದ್ರಶೇಖರಪ್ಪ, ಪಿ.ಸಿ.ಜಯಣ್ಣ ಇವರುಗಳು ಆಳಿದ್ದಾರೆ. ಕೆಲವರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೊಸೈಟಿಯನ್ನು ಬಿಡಿಸಿಕೊಳ್ಳಲು ೨೦೦೫ ರಲ್ಲಿ ಹೋರಾಟ ಮಾಡಿ ಚುನಾವಣೆ ಮೂಲಕ ವಶಕ್ಕೆ ಪಡೆದುಕೊಂಡಾಗ ಒಂದುವರೆ ಕೋಟಿ ರೂ.ನಷ್ಟದಲ್ಲಿತ್ತು. ಎಲ್ಲವನ್ನು ಬಗೆಹರಿಸಿಕೊಂಡು ಈಗ ಸುಸ್ಥಿತಿಯಲ್ಲಿಟ್ಟಿದ್ದೇನೆಂದು ಹೇಳಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಸುತ್ತ ಎರಡುವರೆ ಕೋಟಿ ರೂ. ಬೆಲೆಬಾಳುವ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ಪ್ರತಿ ತಿಂಗಳು ನಾಲ್ಕುವರೆ ಲಕ್ಷ ರೂ. ಬಾಡಿಗೆ ಬರುತ್ತದೆ. ಇತರೆ ಮೂಲಗಳಿಂದ ಒಂದುವರೆ ಲಕ್ಷ ರೂ.ಆದಾಯ ಬರುವಂತೆ ಮಾಡಿದ್ದೇನೆ. ಡಿ.ಸಿ.ಸಿ. ಬ್ಯಾಂಕ್‌ನಿಂದ ಐವತ್ತು ಲಕ್ಷ ರೂ.ಗಳನ್ನು ಸಾಲ ಪಡೆದಿದ್ದನ್ನು ತೀರಿಸಲಾಗಿದೆ. ಷೇರುದಾರರಿಗೆ ಐವತ್ತು ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೆ ಸಾಲ ಕೊಡುವ ವ್ಯವಸ್ಥೆಯಿದೆ. ಕಳೆದ ವರ್ಷ ಹದಿನಾರು ಪರ್ಸೆಂಟ್ ಡೆವಿಡೆಂಟ್ ಕೊಟ್ಟಿದ್ದೇವೆ. ಮುಂದೆ ಶೇ.೨೫ ಪರ್ಸೆಂಟ್ ಡೆವಿಡೆಂಟ್ ನೀಡಲಾಗುವುದು.

ಎರಡು ಕೋಟಿ ರೂ.ವೆಚ್ಚದಲ್ಲಿ ಸಹಕಾರಿ ಸಮುದಾಯ ಭವನ ನಿರ್ಮಿಸುವ ಗುರಿಯಿದೆ. ಇದರಿಂದ ಪ್ರತಿ ತಿಂಗಳು ಸೊಸೈಟಿಗೆ ಮೂವತ್ತರಿಂದ ಮೂವತ್ತೈದು ಲಕ್ಷ ರೂ. ಬಾಡಿಗೆ ಬರುವಂತಾಗುತ್ತದೆ. ಒಟ್ಟಾರೆ ಮಾಸಿಕ ಒಂದು ಕೋಟಿ ರೂ.ಆದಾಯ ಗಳಿಸುವ ಉದ್ದೇಶವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಎನ್.ಎಂ.ಪುಷ್ಪವಲ್ಲಿ ಹಾಗೂ ನಿರ್ದೇಶಕರುಗಳು ಈ ಸಂದರ್ಭದಲ್ಲಿದ್ದರು. ಅಪಾರ ಅಭಿಮಾನಿಗಳು ಎಂ.ನಿಶಾನಿ ಜಯಣ್ಣನವರನ್ನು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

 

 

Share This Article
error: Content is protected !!
";