ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕೋಳಿ ಮೊಟ್ಟೆಗಳ ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದ್ದು ಕೋಳಿ ಮೊಟ್ಟೆ ಪರೀಕ್ಷೆಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಆದರೂ ಇಂತಹ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಅನಾವಶ್ಯಕವಾಗಿ ಇಂತಹ ವಿಚಾರಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಳಗಾವಿ ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಅವರು ಶೂನ್ಯ ವೇಳೆಯಲ್ಲಿ, ಖಾಸಗಿ ಕಂಪನಿಯೊಂದು ಮೊಟ್ಟೆ ಕುರಿತು ಅಪಪ್ರಚಾರ ನಡೆಸುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದಾಗ ಸಚಿವರು, ಇದಕ್ಕೆ ಉತ್ತರಿಸಿದ ಸಚಿವರು, ಮೊಟ್ಟೆಗಳ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಲೋಪ ಕಂಡುಬಂದಿಲ್ಲ ಎಂದು ತಿಳಿಸಿದರು.
ರಮೇಶ್ ಬಾಬು ಅವರು ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿ ಮಾತನಾಡಿ, ಖಾಸಗಿ ಸಂಸ್ಥೆಯೊಂದು ಮೊಟ್ಟೆ ಬಳಕೆ ಆರೋಗ್ಯಕ್ಕೆ ಮಾರಕ ಎಂದು ಯೂಟ್ಯೂಬ್ನಲ್ಲಿ ಪ್ರಚಾರ ಮಾಡಿದ್ದರಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ದೇಶದಲ್ಲಿ 2024 ಹಾಗೂ 25ನೇ ಸಾಲಿನಲ್ಲಿ 150 ಬಿಲಿಯನ್ ಮೊಟ್ಟೆ ಉತ್ಪಾದಿಸಲಾಗಿದೆ. ವಿಶ್ವದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕವು ಐದನೇ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಪೌಲ್ಟ್ರಿ ಮುಖಾಂತರ ಶೇ.84ರಷ್ಟು ಮೊಟ್ಟೆ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಕೋಳಿ ಮೊಟ್ಟೆ ಪೌಷ್ಠಿಕ ಆಹಾರವಾಗಿದ್ದು, ಶಾಲಾ ಮಕ್ಕಳಿಗೂ ನೀಡಲಾಗುತ್ತಿದೆ. ಪ್ರತಿ ವರ್ಷ 1.5 ಮಿಲಿಯನ್ ಟನ್ ಮೊಟ್ಟೆಯನ್ನು ದೇಶದಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತಿದೆ ಎಂದು ಖಾಸಗಿ ಕಂಪನಿ ಅಪಪ್ರಚಾರ ಮಾಡಿದೆ. ಇದರ ಹಿಂದೆ ಮೊಟ್ಟೆ ಉತ್ಪಾದನೆಗೆ ತೊಂದರೆ ಮಾಡುವ ದುರುದ್ದೇಶವಿದೆ ಎಂದು ಅವರು ದೂರಿದರು.
ನಿಯಂತ್ರಣದಲ್ಲಿ ಇಲಿ ಜ್ವರ-
ರಾಜ್ಯದಲ್ಲಿ ಕಳೆದ 11 ತಿಂಗಳಲ್ಲಿ ಒಟ್ಟು 2,134 ಇಲಿ ಜ್ವರ ಪ್ರಕರಣಗಳು ಧೃಡೀಕೃತವಾಗಿವೆ ಎಂದು ವರದಿಯಾಗಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಶೇ.1ರಷ್ಟು ಪ್ರಕರಣಗಳು ಕಡಿಮೆಯಾಗಿದ್ದು, ಈ ಬಗ್ಗೆ ಸಂಪೂರ್ಣವಾಗಿ ನಿಯಂತ್ರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್‍ನಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 2,164 ಧೃಡೀಕೃತ ಪ್ರಕರಣ ವರದಿಯಾಗಿದ್ದವು. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಶೇ.1ರಷ್ಟು ಪ್ರಕರಣಗಳು ಕಡಿಮೆಯಾಗಿದ್ದು, ನಿಯಂತ್ರಣದಲ್ಲಿದೆ. ಅದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರಕರಣಗಳು ಏರಿಕೆಯಾಗಿದೆ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಇಲಿ ಜ್ವರ ರೋಗದ ನಿರ್ದಿಷ್ಟ ಮತ್ತು ಆರಂಭಿಕ ಪತ್ತೆಗಾಗಿ ಪ್ರಾದೇಶಿಕ ಪ್ರಯೋಗಾಲಯ ತೆರೆಯಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಂದ ಬರುವ ಮಾದರಿಗಳನ್ನು ಸ್ವೀಕರಿಸಿ, ಅವುಗಳನ್ನೂ ಸಹ ಪರೀಕ್ಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೇಂದ್ರಕ್ಕೆ ಪತ್ರ: ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಸಂಸ್ಥೆಯ ವಿಮಾನ ಯಾನ ಸೇವೆ ಮುಂದುವರೆಸಲು ಉಡಾನ್ ಯೋಜನೆಯಡಿ ಹೊಸದಾಗಿ ಬಿಡ್‍ಗಳನ್ನು ಆಹ್ವಾನಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ಸೇವೆಯನ್ನು ಒದಗಿಸುತ್ತಿದ್ದ ಖಾಸಗಿ ವಿಮಾನ ಸಂಸ್ಥೆಯು ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬೇಡಿಕೆಯು ಕಡಿಮೆಯಾಗಿರುವ ಕಾರಣ ಕಳೆದ ಅ.15ರಂದು ತನ್ನ ಸೇವೆ ಸ್ಥಗಿತಗೊಳಿಸಿದೆ ಎಂದರು.

