ಮುಡಾ ಪ್ರಕರಣದಲ್ಲಿ ಯಾರಿಗೂ ಕ್ಲೀನ್ ಚಿಟ್ ಕೊಟ್ಟಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಿಂದಿನ ಆಯುಕ್ತ ದಿನೇಶ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದ್ದು ಮುಂದಿನ ದಿನಗಳಲ್ಲಿ ಅಕ್ರಮವಾಗಿ ನಿವೇಶನ ಪಡೆದಿರುವ ಎಲ್ಲರಿಗೂ ಶಿಕ್ಷೆ ಆಗುವುದು ಖಚಿತ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ನಾನು ಆರೋಪ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ತನಿಖೆ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಯಿತು ಎಂಬ ಕಾರಣಕ್ಕೆ ಮತ್ತು ಸಿದ್ಧರಾಮಯ್ಯನವರು ತಮ್ಮ ಪ್ರಭಾವ ಬೀರಿ ಇವತ್ತು ಸುಳ್ಳು ವರದಿಯನ್ನು ಕೊಡಿಸಿದ್ದಾರೆ. ಹೀಗಾಗಿ ಪ್ರಕರಣ ಮುಚ್ಚಿಹೋಯಿತು ಎಂದು ಜನಸಾಮಾನ್ಯರಲ್ಲಿ ತಪ್ಪು ಭಾವನೆ ಮೂಡಿತ್ತು. ಆದರೆ ಆರೋಪಕ್ಕೆ ಪೂರಕವಾಗಿ ನಾನು ಕೊಟ್ಟಿರುವ ಸಾಕ್ಷ್ಯಾಧಾರಗಳು ಕ್ರಮವಾಗುತ್ತದೆ ಎಂದು ನಾನು ಪ್ರಾರಂಭದಲ್ಲೇ ಹೇಳಿದ್ದೇನೆ. ಅದೇ ಪ್ರಕಾರವಾಗಿ ಇವತ್ತು ಮುಡಾ ಆಯುಕ್ತರಾಗಿದ್ದ ದಿನೇಶ್ ಅವರನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.

- Advertisement - 

ಶಿಕ್ಷೆ ಖಚಿತ:
ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಜನರನ್ನು ಬಂಧಿಸುವ ಎಲ್ಲಾ ಸಾಧ್ಯತೆಗಳು ಇದೆ. 50:50 ಅಕ್ರಮದಲ್ಲಿ ಯಾರು ಯಾರು ಅಕ್ರಮ ಮಾಡಿದ್ದಾರೋ ಅವರೆಲ್ಲರಿಗೂ ಶಿಕ್ಷೆಯಾಗುವುದು ಖಚಿತ. 50:50ರಂತೆ ನಿವೇಶನಗಳನ್ನು ಕೊಟ್ಟಿದ್ದರು. ಆ ನಿವೇಶನಗಳ ಅಕ್ರಮದಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿರುವ ಕಾರಣಕ್ಕೆ ಜಾರಿ ನಿರ್ದೇಶನಾಲಯದವರು ದಿನೇಶ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಕ್ಲೀನ್ ಚಿಟ್ ಕೊಟ್ಟಿಲ್ಲ:
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಗೂ ಕ್ಲೀನ್ ಚಿಟ್ ಕೊಟ್ಟಿಲ್ಲ
, ಆದರೆ ಅಕ್ರಮವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ ಅಕ್ರಮಕ್ಕೆ ಸಿದ್ಧರಾಮಯ್ಯನವರ ಕುಟುಂಬವೂ ಕಾರಣ ಎಂಬುದಕ್ಕೆ ಸಾಕ್ಷಿ ಇಲ್ಲ ಎಂದು ಹೇಳುತ್ತಾರೆ. ಅವರ ಪರವಾಗಿ ವರದಿ ಕೊಟ್ಟಿದ್ದಾರೆ ಅಷ್ಟೇ. ತೀರ್ಪು ಕೊಟ್ಟಿಲ್ಲ. ಮಾನ್ಯ ನ್ಯಾಯಾಲಯ ತೀರ್ಪು ಕೊಟ್ಟಾಗಷ್ಟೇ ಅಂತಿಮ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನ ಅಕ್ರಮ ನಿವೇಶನ ಪಡೆದಿರುವ ಪ್ರಭಾವಿ ವ್ಯಕ್ತಿಗಳಿದ್ದಾರೆ. ಅವರೆಲ್ಲರೂ ಹಂತಹಂತವಾಗಿ ಬಂಧನವಾಗುತ್ತಾರೆ ಎಂದು ದೂರುದಾರ ಕೃಷ್ಣ ತಿಳಿಸಿದರು.

- Advertisement - 

ಅಕ್ರಮ ವರ್ಗಾವಣೆ:
ಮುಡಾ ಪ್ರಕರಣದಲ್ಲಿ ನೂರಾರು ಕೋಟಿಗಳ ಅಕ್ರಮ ಹಣ ವ್ಯವಹಾರ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಅವರ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಆ ಒಂದು ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಏನು ಬಾಕಿ ಇದೆ
, ಅವೆಲ್ಲವನ್ನೂ ಕೂಡ ಮುಟ್ಟುಗೋಲು ಹಾಕಿಕೊಂಡು, ಇವರು ಅಕ್ರಮವಾಗಿ ಮಾಡಿರುವ ಆಸ್ತಿಯನ್ನು ಕೂಡ ವಶಪಡಿಸಿಕೊಳ್ಳುವಂತಹ ಎಲ್ಲಾ ಸಾಧ್ಯತೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಡಾ ಪ್ರಕರಣದಲ್ಲಿ 1,000ಕ್ಕೂ ಹೆಚ್ಚಿನ ನಿವೇಶನಗಳು ಅಕ್ರಮವಾಗಿವೆ. ನೂರಾರು ಜನರು ಅಕ್ರಮದ ಫಲಾನುಭವಿಗಳಾಗಿದ್ದಾರೆ. ಎಲ್ಲರ ಬಂಧನವಾಗುತ್ತದೆ. ಸಾಕಷ್ಟು ಜನರಿದ್ದಾರೆ ಅವರಿಗೆಲ್ಲ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ. ಇದು ಅಕ್ರಮ ಮಾಡುವಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಎಚ್ಚರಿಕೆ. ಅವರು ಎಷ್ಟೇ ದೊಡ್ಡ ಕೂಡ ಪ್ರಭಾವಿ ಸ್ಥಾನದಲ್ಲಿದ್ದರೂ ಅಪರಾಧ ಕೃತ್ಯ ಎಸಗಿದಾಗ ನನ್ನಂತಹ ಸಾಮಾನ್ಯ ವ್ಯಕ್ತಿ ದೂರು ಅರ್ಜಿ ಕೊಟ್ಟರು ಕೂಡ ಶಿಕ್ಷೆಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದರು.

 

 

 

Share This Article
error: Content is protected !!
";