ಬಂಡೀಪುರ ಅರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಬೇಡ-ಯತ್ನಾಳ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2004 ರಿಂದ 2007-ರ ಅವಧಿಯಲ್ಲಿ ರಾ.ಹೇ.67  ಹಾಗೂ ರಾ.ಹೇ 212 ನಲ್ಲಿ ಸುಮಾರು 215 ವನ್ಯಜೀವಿಗಳು ಬಲಿಯಾಗಿದ್ದವು, ಇದನ್ನು ಮನಗಂಡ ಕರ್ನಾಟಕ ಉಚ್ಚ ನ್ಯಾಯಾಲಯವು ಇಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಿ ಆದೇಶ ಹೊರಡಿಸಿತ್ತು ಎಂದು ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಏಷ್ಯಾ ಮೂಲದ ಆನೆಗಳು ಹಾಗೂ ಹುಲಿಗಳು ನಮ್ಮ ಬಂಡೀಪುರದಲ್ಲಿದೆ. ಇದನ್ನು ರಕ್ಷಿಸಬೇಕಾದದ್ದು ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕರ್ತವ್ಯ. ರಾತ್ರಿ ಸಂಚಾರದ ಅನುಮತಿ ನೀಡಿದ್ದಲ್ಲಿ ಇಲ್ಲಿ ಓಡಾಡುವ ಪ್ರಾಣಿಗಳಿಗೆ ಆಪತ್ತುಂಟಾಗಬಹುದು. ಇದಲ್ಲದೆ ರಾತ್ರಿ ಸಂಚಾರಕ್ಕೆ ಅನುಮತಿ ಕೊಟ್ಟಲ್ಲಿ ಇಲ್ಲಿ ಅಕ್ರಮ ಬೇಟೆಗಾರರ ಹಾವಳಿ ಹಾಗೂ ಟಿಂಬರ್ ಮಾಫಿಯಾ ದವರು ಇಲ್ಲಿನ ಸಂಪತ್ತನ್ನು, ಪ್ರಾಣಿ ಸಂಕುಲ ವನ್ನು ನಾಶ ಮಾಡಬಹುದು ಎಂದು ಯತ್ನಾಳ್ ಎಚ್ಚರಿಸಿದ್ದಾರೆ.

ಬಂಡೀಪುರ ಅರಣ್ಯದಿಂದ ಪಕ್ಕದಲ್ಲಿರುವ ಮಧುಮಲೈ, ವಯನಾಡು ಹಾಗೂ ನಾಗರಹೊಳೆ ಅರಣ್ಯಕ್ಕೆ ರಾತ್ರಿ ವೇಳೆಯಲ್ಲಿ ಪ್ರಾಣಿಗಳು ಸಂಚರಿಸುತ್ತದೆ. ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದ್ದಲ್ಲಿ, ಇವುಗಳಿಗೆ ತೊಂದರೆಯುಂಟಾಗಿ, ಗ್ರಾಮಗಳಿಗೆ ಅಕ್ಕ ಪಕ್ಕದ ಹಳ್ಳಿಗಳಿಗೆ ನುಗ್ಗುವ ಅವಕಾಶವಿದೆ. ಇದರಿಂದ ಇಲ್ಲಿರುವ ಜನ ವಸತಿ ಪ್ರದೇಶಗಳಿಗೂ ಸಹ ಅಪಾಯವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸರದ ಬಗ್ಗೆ ಕಾಳಜಿಯಿಲ್ಲದ, ಪರಿಜ್ಞಾನವಿಲ್ಲದವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದರೆ ಆಗುವ ದುರಂತ ಏನು ಎಂದು ಇಷ್ಟರಲ್ಲೇ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಸಂಸದೆ ಪ್ರಿಯಾಂಕ ಗಾಂಧಿ ವಿರುದ್ಧ ಯತ್ನಾಳ್ ಹರಿಹಾಯ್ದಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಅರಣ್ಯ ಸಚಿವರು ಈ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಯತ್ನಾಳ್ ಒತ್ತಾಯ ಮಾಡಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";