ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಕೊಪ್ಪಳದಲ್ಲಿ ಬಿಎಸ್ಪಿಎಲ್ ಕಾರ್ಖಾನೆ ಆರಂಭಕ್ಕೆ ಜಿಲ್ಲೆಯ ಜನತೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಈ ಕಾರ್ಖಾನೆ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದ್ದಾರೆ.
ಇಲ್ಲಿ ಕಾರ್ಖಾನೆ ಆರಂಭಿಸುವುದರಿಂದ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯ ಹಾನಿಯಾಗುತ್ತಿದೆ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಮತ್ತು ಜನರು ಹೋರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹೋರಾಟಕ್ಕೆ ನನ್ನ ಬೆಂಬಲವೂ ಇದೆ. ಆದರೆ ರಾಜ್ಯ ಸರ್ಕಾರ ಹಾಗೂ ಕಾರ್ಖಾನೆ ನಡುವೆ ನಡೆದ ಒಪ್ಪಂದ. ನನ್ನ ಬಳಿ ಪ್ರಸ್ತಾಪ ಬಂದಿಲ್ಲ ಎಂದು ತಿಳಿಸಿದರು.
ಕಾರ್ಖಾನೆ ಆರಂಭಿಸಲು ಸಾರ್ವಜನಿಕರು ಮತ್ತು ಸ್ವಾಮೀಜಿಗಳು ವಿರೋಧ ಮಾಡುತ್ತಿರುವುದರಿಂದ ಇವರುಗಳ ಜೊತೆ ಸರ್ಕಾರ ಕುಳಿತು ಮಾತುಕತೆ ನಡೆಸಬೇಕು. ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಯೋಜನೆ ಅನುಷ್ಠಾನಗೊಳಿಸುವ ಕುರಿತು ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಹಾಗೂ ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕೊಪ್ಪಳ ಜಿಲ್ಲೆಗೆ ವಿಶೇಷ ಕೈಗಾರಿಕಾ ನೀತಿ ಅನುಷ್ಠಾನ ಮಾಡುವಂತೆ ಗವಿ ಸಿದ್ದೇಶ್ವರ ಸ್ವಾಮೀಜಿಗಳ ಬೇಡಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ದೇಶದಲ್ಲಿ ಉಕ್ಕು ಉತ್ಪಾದಿಸುವ ಸರ್ಕಾರಿ ಕಾರ್ಖಾನೆಗಳು ಪರಿಸರಕ್ಕೆ ಹಾನಿಯಾಗದಂತೆ ಅರಣ್ಯೀಕರಣ ಮಾಡಿ ಕ್ರಮ ಕೈಗೊಂಡಿವೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ, ಜನರ ಆರೋಗ್ಯದ ಮೇಲೆ ಸಮಸ್ಯೆ ಆಗದ ರೀತಿಯಲ್ಲಿ ಕಾರ್ಖಾನೆ ನಿರ್ಮಿಸಬೇಕಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರ ಜನರ ಪರವಾಗಿರಬೇಕು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಆದರೆ, ಹಣ ಸೋರಿಕೆ ಮತ್ತು ದುರ್ಬಳಕೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹತ್ತು ಹಲವಾರು ಯೋಜನೆಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿವೆ. ಕೆಲವು ಯೋಜನೆಗಳಲ್ಲಿ ಹಣ ದುರ್ಬಳಕೆಯಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಕುಮಾರಸ್ವಾಮಿ ಪ್ರತ್ರಿಕ್ರಿಯಿಸಿ, ರಾಜ್ಯದ ಜನ ನಟ್ಟು ಬೋಲ್ಟ್ ಸರಿ ಮಾಡಲು ಡಿ.ಕೆ.ಶಿವಕುಮಾರ್ಗೆ ಅಧಿಕಾರ ಕೊಟ್ಟಿದ್ದಾರಾ? ಆ ಕೆಲಸ ಮಾಡಲು ಬೇರೆಯವರಿದ್ದಾರೆ. ರಾಜ್ಯದ ಜನ ಅವರಿಗೆ 138 ಸ್ಥಾನ ಕೊಟ್ಟಿದ್ದಾರೆ. ಜನರ ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ಹೊರತು ಸಿನೆಮಾ ಮತ್ತು ರಾಜಕಾರಣಕ್ಕೆ ನಮಗೆ ಯಾರು ಬೆಂಬಲ ಕೊಟ್ಟಿದ್ದಾರೋ ಬಿಟ್ಟಿದ್ದಾರೋ ಅನ್ನೋದನ್ನೆಲ್ಲ ಲೆಕ್ಕ ಮಾಡಿಕೊಂಡು ಕೂರುವುದಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ತಾರೆ ಎಂಬ ಸಚಿವ ಜಮಿರ್ ಹೇಳಿಕೆಗೆ, ಯಾರು ಏನೆಲ್ಲಾ ಆಗ್ತಾರೆ ಅಂತ ಕಾಲ ನಿರ್ಧಾರ ಮಾಡುತ್ತದೆ. ಮೊದಲು ಕಾಂಗ್ರೆಸ್ನವರು ತಮ್ಮ ಮನೆಯ ಜಗಳವನ್ನು ಬಗೆಹರಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ತಿರುಗೇಟು ನೀಡಿದರು.