ಡಿ.ಕೆ ಸುರೇಶ್ ಇವರಿಂದ ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖಂಡರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಬೇಕು ಅಂತ ಪಕ್ಷದ ಮುಖಂಡರು ತೀರ್ಮಾನ ಮಾಡಿದ್ದಾರೆ‌. ಅದರಂತೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಸುರೇಶ್ ತಿಳಿಸಿದರು.

ಪಕ್ಷದ ಮುಖಂಡರೊಂದಿಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ನಾನು ಈಗಲೂ ರೆಸ್ಟ್ ಮೂಡ್​​ನಲ್ಲೇ ಇದ್ದೇನೆ. ಕೆಲವು ವಿಚಾರದಲ್ಲಿ ಅವರ ಮಾತಿಗೂ ನಾವು ಗೌರವ ಕೊಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಾರ್ಗದರ್ಶನ ಕೊಟ್ಟಿದ್ದಾರೆ. ಅದರಂತೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಮುಂದೆ ನೋಡೋಣ. ಪಕ್ಷದ ಮುಖಂಡರು, ಜಿಲ್ಲೆಯ ನಾಯಕರು ಅವರ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿ ಅವರ ಮಾತುಗಳಿಗೆ, ನಾಯಕರ ಸೂಚನೆಗೆ ತಲೆಬಾಗಬೇಕಾಗುತ್ತದೆ ಎಂದು ಮಾಜಿ ಸಂಸದ ಸುರೇಶ್ ತಿಳಿಸಿದರು.

ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿ ಆಗ್ತಾರೆ ಎನ್ನುವ ಚರ್ಚೆಗೆ ಪ್ರತಿಕ್ರಿಯಿಸಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಅರ್ಜಿ ಸಲ್ಲಿಕೆ ಮಾಡಲು ಕಾರ್ಯಕರ್ತರು ಮತ್ತು ನಿರ್ದೇಶಕರು, ಮಾಜಿ ನಿರ್ದೇಶಕರು, ಮಾಜಿ ಅಧ್ಯಕ್ಷರು ನಮ್ಮ ಜಿಲ್ಲೆಯ ಶಾಸಕರು ಸೇರಿ ಎಲ್ಲರೂ ಒತ್ತಡ ಹಾಕಿದ್ದಾರೆ ಎಂದು ಹೇಳಿದರು.

ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆಗೆ ಒಪ್ಪದ ನೀವು ಈಗ ಒಪ್ಪಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದವರ ಸಲಹೆ, ಸೂಚನೆಗಳನ್ನು ನಾನು ಸ್ವೀಕಾರ ಮಾಡಿದ್ದೇನೆ. ಸದ್ಯಕ್ಕೆ ಕೆಎಂಎಫ್ ವಿಚಾರ ಚರ್ಚೆಯಲ್ಲಿ ಇಲ್ಲ. ಈಗ ಸದ್ಯಕ್ಕೆ ಇರೋದು ಬೆಂಗಳೂರು ಹಾಲು ಒಕ್ಕೂಟ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಕಳೆದ ಹತ್ತು ವರ್ಷಗಳಿಂದ ನಮ್ಮ ಪಕ್ಷದ ಮುಖಂಡರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರ ಜೊತೆ ಇರಬೇಕು ಅಂತ ಒತ್ತಾಯ ಇದೆ. ಅದಕ್ಕಾಗಿ ಸದ್ಯಕ್ಕೆ ಒಪ್ಪಿದ್ದೇನೆ ಎಂದು ಅವರು ತಿಳಿಸಿದರು.

ಭೂ ಕಬಳಿಕ ಆರೋಪ ಕುರಿತು ಪ್ರತಿಕ್ರಿಯಿಸಿದ ಸುರೇಶ್, ವಿಪಕ್ಷ ನಾಯಕ ಆರ್. ಅಶೋಕ್ ಅವರು ವಿಪಕ್ಷ ನಾಯಕರು. ಮಾಹಿತಿ ಪಡೆಯುವ ಯೋಗ್ಯತೆ, ಅರ್ಹತೆ ಎರಡು ಇದೆ. ಅರ್ಹತೆ, ಯೋಗ್ಯತೆ, ಇಲ್ಲ ಎಂದರೆ ನಾನು ಮಾಹಿತಿ ಕೊಡುತ್ತೇನೆ. ಕಬಳಿಕೆ ಬಗ್ಗೆ ಮಾತಾಡಬೇಕು ಎಂದರೆ ನಾವು ಉತ್ತರಹಳ್ಳಿದು ಮಾತಾಡಬೇಕಾಗುತ್ತದೆ ಎಂದು ಮಾಜಿ ಸಂಸದ ಸುರೇಶ್ ತಿರುಗೇಟು ನೀಡಿದರು.

- Advertisement - 
Share This Article
error: Content is protected !!
";