ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಧರ್ಮಾಧಾರಿತ ದೇಶ ಕಟ್ಟಲು ಹೊರಟಿರುವವರ ವಿರುದ್ದ ಕಮ್ಯುನಿಸ್ಟ್ ಪಕ್ಷದ ಹೋರಾಟ ನಿರಂತರವಾಗಿರುತ್ತದೆಂದು ಕಮ್ಯುನಿಸ್ಟ್ ಪಾರ್ಟಿ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ೧೯ ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕಟ್ಟಕಡೆಯವರನ್ನು ಮೇಲೆತ್ತಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಕಮ್ಯುನಿಸ್ಟ್ ಪಕ್ಷದ ಉದ್ದೇಶ. ಭಗತ್‌ಸಿಂಗ್‌ರವರಲ್ಲಿ ಸಮ ಸಮಾಜದ ಕನಸಿತ್ತು. ಕಮ್ಯುನಿಸ್ಟ್ ಪಾರ್ಟಿಗೆ ದೇಶಕ್ಕಾಗಿ ಪ್ರಾಣ ಕೊಟ್ಟ ಇತಿಹಾಸವಿದೆ. ಚಳುವಳಿ, ಹೋರಾಟಗಳ ಮೂಲಕ ಜನರ ಮನಸ್ಸು ಗೆದ್ದು ಕಮ್ಯನಿಸ್ಟ್ ಕಾರ್ಯಕರ್ತರು ಚುನಾವಣೆಯಲ್ಲಿಯೂ ನಿಂತು ರಾಜಕೀಯವಾಗಿ ಅಧಿಕಾರ ಹಿಡಿಯಬೇಕು. ಬಿಹಾರ, ತಮಿಳುನಾಡು, ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಶಾಸಕರುಗಳಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು. ಯಾರನ್ನು ಸೋಲಿಸಬೇಕೆಂಬ ಶಕ್ತಿ ಕಮ್ಯುನಿಸ್ಟ್ ಪಕ್ಷಕ್ಕಿದೆ ಎಂದರು.
ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಆದಿವಾಸಿಗಳ ಹಕ್ಕಿಗಾಗಿ ಹೋರಾಟ, ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ದ ಚಳುವಳಿಯಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸಿಪಿಐ.ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‌ಬಾಬು ಮಾತನಾಡಿ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಹಟ್ಟಿ ಚಿನ್ನದ ಗಣಿ ಪುನರಾರಂಭಿಸಬೇಕು. ಸೂರಿಗಾಗಿ ಸಮರ ನಮ್ಮ ಹೋರಾಟದ ಉದ್ದೇಶ. ವಿದ್ಯಾಭ್ಯಾಸ, ಆರೋಗ್ಯವನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಿಪಿಐ. ರಾಜ್ಯ ಮಂಡಳಿ ಸದಸ್ಯರುಗಳಾದ ಸಿ.ವೈ.ಶಿವರುದ್ರಪ್ಪ, ಟಿ.ಆರ್.ಉಮಾಪತಿ, ಚಿತ್ರದುರ್ಗ ತಾಲ್ಲೂಕು ಕಾರ್ಯದರ್ಶಿ ಸಿ.ವೈ.ಸತ್ಯಕೀರ್ತಿ, ಹೊಳಲ್ಕೆರೆ ತಾಲ್ಲೂಕು ಕಾರ್ಯದರ್ಶಿ ಅಮಿನಾಭಿ, ಹೊಸದುರ್ಗ ತಾಲ್ಲೂಕು ಕಾರ್ಯದರ್ಶಿ ಕುಮಾರಸ್ವಾಮಿ, ಚಳ್ಳಕೆರೆ ತಾಲ್ಲೂಕು ಕಾರ್ಯದರ್ಶಿ ಗಿರೀಶ್, ಮೊಳಕಾಲ್ಮುರು ತಾಲ್ಲೂಕು ಕಾರ್ಯದರ್ಶಿ ಜಾಫರ್‌ಷರೀಫ್, ಪೆನ್ನಯ್ಯ ಇವರುಗಳು ವೇದಿಕೆಯಲ್ಲಿದ್ದರು.

