ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪ್ರಕರಣದ ಪ್ರಮುಖ(ಎ1) ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇದೇ ತಿಂಗಳ ನವೆಂಬರ್ 6ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಲಾಗಿದೆ.
ಹಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವರದಿಗಾರರೊಂದಿಗೆ ಮಾತನಾಡಿ ಲೋಕಾಯುಕ್ತ ನೋಟಿಸ್ ಕುರಿತು ಪ್ರತಿಕ್ರಿಯಿಸಿ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತದಿಂದ ನನಗೆ ನೋಟಿಸ್ ಬಂದಿದೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿಎಂ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿರುದ್ಧ ಮುಡಾ ಹಗರಣ ಸಂಬಂಧ ವಿಷಯಕ್ಕೆ ಎಫ್ಐಆರ್ ದಾಖಲಿಸಿದ್ದರು.
ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಸಿಎಂ ಸಿದ್ದರಾಮಯ್ಯನವರು ಮೊದಲ ಬಾರಿಗೆ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ಲೋಕಾಯುಕ್ತ ಪೊಲೀಸರು ಪ್ರಕರಣ ಸಂಬಂಧ ಈಗಾಗಲೇ ಎಲ್ಲ ಆರೋಪಿಗಳ ವಿಚಾರಣೆ ಮುಗಿಸಿದ್ದು, ಸಿದ್ದರಾಮಯ್ಯನವರ ವಿಚಾರಣೆ ಮಾತ್ರ ಬಾಕಿ ಇದ್ದು ಅವರ ವಿಚಾರಣೆಗೂ ನೋಟಿಸ್ ನೀಡಲಾಗಿದೆ.
ಮುಡಾಪ್ರಕರಣದಲ್ಲಿ ಎ2 ಆರೋಪಿ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಎ3 ಮಲ್ಲಿಕಾರ್ಜುನ ಹಾಗೂ ಎ4 ದೇವರಾಜು ಸೇರಿ ಹಲವರ ವಿಚಾರಣೆಯನ್ನು ಈಗಾಗಲೇ ಲೋಕಾಯುಕ್ತರು ನಡೆಸಿದ್ದಾರೆ.