ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಖಾಸಗಿ ಸಂಸ್ಥೆಗಳು, ಸಂಘಟನೆಗಳು ಮತ್ತು ಗುಂಪುಗಳು ತಮ್ಮ ಚಟುವಟಿಕೆಗಳಿಗೆ ಸರ್ಕಾರಿ ಆಸ್ತಿ ಅಥವಾ ಸಾರ್ವಜನಿಕ ಸ್ಥಳಗಳನ್ನು ಬಳಸುವ ಮೊದಲು ಅನುಮತಿ ಪಡೆಯಬೇಕೆಂದು ಸರ್ಕಾರ ಕಳೆದ ಅಕ್ಟೋಬರ್ 18 ರಂದು ಆದೇಶ ಹೊರಡಿಸಿತ್ತು. ಸರ್ಕಾರ ಹೊರಡಿಸಿರುವ ಆದೇಶವು ನಿರ್ದಿಷ್ಟವಾಗಿ ಆರ್‌ಎಸ್‌ಎಸ್ ಹೆಸರಿಸದಿದ್ದರೂ, ಹಿಂದೂ ಬಲಪಂಥೀಯ ಸಂಘಟನೆಯ ಚಟುವಟಿಕೆ ನಿಯಂತ್ರಿಸುವ ಗುರಿ ಹೊಂದಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಸರ್ಕಾರದ ಈ ಕ್ರಮ ಪ್ರಶ್ನಿಸಿ ಹುಬ್ಬಳ್ಳಿಯ ‘ಪುನಃಶ್ಚೇತನ ಸೇವಾ ಸಂಸ್ಥೆ‘ಯ ಅಧ್ಯಕ್ಷ ವಿನಾಯಕ ಮತ್ತು ವಿ ಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚೌಹಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿ ತಡೆಯಾಜ್ಞೆ ನೀಡಿತು.
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಅನುಸರಿಸಿ ಇತ್ತೀಚೆಗೆ ನಡೆದ ಸಚಿವ ಸಂಪುಟದ ನಿರ್ಧಾರದ ಆಧಾರದ ಮೇಲೆ ಸರ್ಕಾರ ಈ ಆದೇಶ ಹೊರಡಿಸಿತ್ತು.
ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಿದೆ.

