ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸಕ್ತ ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆ ಕೂಲಿಯನ್ನು ರೂ.21 ಹೆಚ್ಚಳ ಮಾಡುವ ಮೂಲಕ ರೂ.370 ಕೂಲಿ ನೀಡಲಿದ್ದು, ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದರು.
ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಗಡಿ ಗ್ರಾಮವಾದ ಅಶೋಕ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಐಇಸಿ ಚಟುವಟಿಕೆಯಡಿ ಕೂಲಿ ಬೇಡಿಕೆ ಅಭಿಯಾನ ಕಾರ್ಯಕ್ರಮವನ್ನು ನಮೂನೆ–6 ಪಡೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯ ಕೂಲಿಕಾರರು 100 ದಿನಗಳು ನರೇಗಾದಲ್ಲಿ ಕೆಲಸ ಮಾಡಿ ಒಟ್ಟು 37,000/-ರೂ ಗಳನ್ನು ಪಡೆದು, ತಮ್ಮ ತಮ್ಮ ಕುಟುಂಬಗಳು ಆರ್ಥಿಕವಾಗಿ ಸದೃಢರಾಗಲಿ ಮತ್ತು ಈ ತಾಲ್ಲೂಕಿನ ಕೂಲಿಗಾರರು ಬೇರೆ ಊರುಗಳಿಗೆ ಗುಳೆ ಹೋಗದೇ ತಮ್ಮ ತಮ್ಮ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿ. ಅದರಲ್ಲೂ ಮಹಿಳಾ ಕೂಲಿಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕೂಲಿಗಾರರಿಂದ 320 ಕೂಲಿ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಯಿತು.
ನಂತರ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗೋಕಟ್ಟೆ ಹೂಳು ತೆಗೆಯುವ ಕಾಮಗಾರಿಗೆ ಭೇಟಿ ನೀಡಿ, ಕೂಲಿಗಾರರೊಂದಿಗೆ ಸಂವಾದ ನೆಡೆಸಿ, ಆರೋಗ್ಯ ವಿಚಾರಿಸಿದರು. ತಮ್ಮ ಕುಟುಂಬದಲ್ಲಿ 3 -4 ವರ್ಷದ ಒಳಗಿನ ಮಕ್ಕಳಿದ್ದಲ್ಲಿ ಕೂಸಿನ ಮನೆಗೆ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು. ಅಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆರೈಕೆದಾರರು ಇದ್ದು, ಅವರು ತಾಯಿಯಂತೆ ತಮ್ಮ ಮಕ್ಕಳನ್ನು ಆರೈಕೆ ಮಾಡುತ್ತಾರೆ. ಕೆಲಸ ಮುಗಿದ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದರು. ಕೂಲಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಜಿ.ಪಂ ಸಿಇಒ ಅವರಲ್ಲಿ ಕೂಲಿಗಾರರು ಕೋರಿದರು.
ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದಲ್ಲಿ ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಮರುಪೂರಣೆಗಾಗಿ ಪ್ರಾಯೋಗಿಕವಾಗಿ ನಿರ್ಮಿಸುತ್ತಿರುವ ಇಂಜೆಕ್ಷನ್ ವೆಲ್ ಕಾಮಗಾರಿಯನ್ನು ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರು. ಈ ಯೋಜನೆಯ ನಿಯಮಾನುಸಾರದಂತೆ ಕಾಮಗಾರಿಯನ್ನು ಅನುಷ್ಟಾನಗೊಳಿಸುವಂತೆ ಭೂ ವಿಜ್ಞಾನಿಗಳು ಮತ್ತು ಇಂಜಿನಿಯರ್ ಅವರಿಗೆ ಸೂಚಿಸಿದರು. ನಂತರ ಮನೆ ಮನೆಗೆ ಗಂಗೆಯ ನಳದಲ್ಲಿ ನೀರು ಹಿಡಿದು ನೀರಿನ ಗುಣಮಟ್ಟವನ್ನು ಸ್ಥಳದಲ್ಲಿಯೇ ಸಾರ್ವಜನಿಕರ ಸಮ್ಮುಖದಲ್ಲಿ ಪರೀಕ್ಷೆ ಕೈಗೊಂಡಾಗ ನೀರಿನ ಗುಣಮಟ್ಟ ಅನುಮತಿಸಲಾದ ಮಿತಿಯೊಳಗೆ ಕಂಡು ಬಂದಿರುತ್ತದೆ ಎಂದು ಪರೀಕ್ಷಕರಾದ ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ, ಜಿಲ್ಲಾ ಪಂಚಾಯತ್ನ ನರೇಗಾ ಶಾಖೆಯ ಎಡಿಪಿಸಿ ಮೋಹನ್ ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ಸಹಾಯಕ ನಿರ್ದೇಶಕ ಗಣೇಶ್, ನರೇಗಾ ತಾಲ್ಲೂಕು ತಾಂತ್ರಿಕ ಸಂಯೋಜಕ ಮಂಜುನಾಥ್, ತಾಲೂಕು ಐಇಸಿ ಸಂಯೋಜಕ ದೇವರಾಜ್, ತಾಲ್ಲೂಕು ಎಂಐಎಸ್ ಸಂಯೋಜಕ ಮಧುಸೂಧನ್ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.