ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಖಾಲಿ ನಿವೇಶನಗಳಲ್ಲಿನ ಗಿಡ, ಮರ, ಮುಳ್ಳಿನ ಕಂಟಿಗಳನ್ನು ಕಡಿದು ಸ್ವಚ್ಛಗೊಳಿಸುವಂತೆ ನಗರಸಭೆ ಅಧ್ಯಕ್ಷ ಜೆ.ಆರ್.ಅಜೆಯ್‌ಕುಮಾರ್(ಅಜ್ಜಪ್ಪ) ಹಾಗೂ ಪೌರಾಯುಕ್ತ ಎ.ವಾಸೀಂ ಮನವಿ ಮಾಡಿದ್ದಾರೆ.
ಹಿರಿಯೂರು ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಗರ ವ್ಯಾಪ್ತಿಯ ನಿವೇಶನಗಳ ಆಸ್ತಿ ಮಾಲೀಕರು ಕೂಡಲೇ ಸ್ವಚ್ಛತೆಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಹಿರಿಯೂರು ನಗರ ವ್ಯಾಪ್ತಿಯ ಖಾಲಿ ನಿವೇಶನ, ಮನೆಗಳ ಸುತ್ತ ಮುತ್ತಲಿನ ಖಾಲಿ ಜಾಗಗಳಲ್ಲಿ ಸಾಕಷ್ಟು ಮುಳ್ಳಿನ ಗಿಡ, ಮರಗಳು ಬೆಳೆದಿದ್ದು ವಿಷ ಜಂತುಗಳು ಆ ಮರಗಳ ಪೊದೆಯಲ್ಲಿ ಸೇರಿಕೊಂಡು ಸಾರ್ವಜನಿಕರಿಗೆ ಕಚ್ಚಿರುವ ಪ್ರಕರಣಗಳು ಇತ್ತೀಚಿಗೆ ನಡೆದಿವೆ.
ಅಲ್ಲದೆ ಮನೆ, ಖಾಲಿ ನಿವೇಶನಗಳಲ್ಲಿ ದೊಡ್ಡ ದೊಡ್ಡ ಮುಳ್ಳಿನ ಗಿಡ ಮರಗಳ ಪೊದೆಗಳಿರುವುದರಿಂದ ಕಳ್ಳತನ ಮಾಡಿದ ಕೊಳ್ಳರು ಸುಲಭವಾಗಿ ತಪ್ಪಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕಳವು ಪ್ರಕರಣಗಳು ಮತ್ತು ವಿಷ ಜಂತುಗಳಿಂದ ಪ್ರಾಣ ಹಾನಿಯಾಗುತ್ತಿರುವುದು ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರಸಭೆ ವತಿಯಿಂದ ಈಗಾಗಲೇ ಖಾಲಿ ನಿವೇಶನಗಳ ಸ್ವಚ್ಛತೆಗೆ ಅನೇಕ ಸಲ ಮನವಿ ಮಾಡಿಕೊಂಡು ಹಲವು ಸೂಚನೆಗಳನ್ನು ನೀಡಿದ್ದರೂ ಸಹ ಆಸ್ತಿ ಮಾಲೀಕರು ಸಹಕರಿಸದೆ ಮುಳ್ಳಿನ ಗಿಡ ಗಂಟೆ ಬೆಳೆದು ಅನಾರೋಗ್ಯ ವಾತವರಣ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಖಾಲಿ ನಿವೇಶನಗಳ ಮಾಲೀಕರು ಬೇರೆ ಬೇರೆ ಸ್ಥಳಗಳಲ್ಲಿರುವುದರಿಂದ ಅವರಿಗೆ ನೇರವಗಿ ಸೂಚನೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ಆಸ್ತಿ ಮಾಲೀಕರ ವಿಳಾಸ ಲಭ್ಯವಾಗುತ್ತಿಲ್ಲ. ಪ್ರಯುಕ್ತ ಪತ್ರಿಕೆ ಮೂಲಕ ಸೂಚನೆ ನೀಡಿದ್ದು ಕೂಡಲೇ ಆಸ್ತಿ ಮಾಲೀಕರು ತಮ್ಮ ನಿವೇಶನಗಳಲ್ಲಿನ ಗಿಡ ಗಂಟೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸಿಕೊಳ್ಳತಕ್ಕದ್ದು ಹಾಗೂ ಕಾಂಪೌಂಡ್ ನಿರ್ಮಿಸಿಕೊಳ್ಳಬೇಕು.
ಮತ್ತು ನಿಮ್ಮ ನಿವೇಶನ ಮುಂಭಾಗ ಮಾಲೀಕರ ಹೆಸರು, ವಿಳಾಸ, ಖಾತೆ, ಅಥವಾ ಅಸೆಸ್ ಮೆಂಟ್ ಸಂಖ್ಯೆ, ಪಿ.ಐ.ಡಿ. ನಂ ಹಾಗೂ ಮೊಬೈಲ್ ನಂಬರ್ ವಿರುವ ನಾಮಫಲಕ ಅಳವಡಿಸಬೇಕು, ಈ ನಿಟ್ಟಿನಲ್ಲಿ ಕ್ರಮವಹಿಸದಿದ್ದರೆ ನಿಯಾಮಾನುಸಾರ ಕರ್ನಾಟಕ ಪುರಸಭೆ ಕಾಯ್ದೆ 1964 ರಂತೆ ನಗರಸಭೆಯಿಂದ ಸ್ವಚ್ಛಗೊಳಿಸಿ ದುಪ್ಪಟ್ಟು ವೆಚ್ಚವನ್ನು ದಂಡವನ್ನಾಗಿ ವಸೂಲಿ ಮಾಡಲಾಗುವುದೆಂದು ನಗರಸಭೆ ಪೌರಾಯುಕ್ತ ಎ ವಾಸೀಂ ಅವರು ಎಚ್ಚರಿಸಿದ್ದಾರೆ.