ಚುನಾವಣಾ ಶಿರಸ್ತೇದಾರ್ ಮಂಜುನಾಥ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ಶಾಖೆ ಶಿರಸ್ತೇದಾರ್ ಎಸ್.ಪಿ. ಮಂಜುನಾಥ ಅವರಿಗೆ ಅಕ್ಟೋಬರ್ ೩೦ರ ಬುಧವಾರ ಸಂಜೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅವರು ಸರ್ಕಾರಿ ಸೇವೆಯಲ್ಲಿ ವಯೋ ನಿವೃತ್ತಿ ಸಹಜ. ಮಂಜುನಾಥ ಅವರು ಸುಮಾರು ೩೬ ವರ್ಷಗಳ ಕಾಲ ಸುದೀರ್ಘ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ವಯೋ ನಿವೃತ್ತಿ ಹೊಂದುತ್ತಿರುವುದು ಸಾಮಾನ್ಯದ ಮಾತಲ್ಲ.
ತಮ್ಮ ಸೇವಾವಧಿಯಲ್ಲಿ ಸೌಮ್ಯ ಸ್ವಭಾವದಿಂದ ಯಾವುದೇ ಒತ್ತಡಕ್ಕೊಳಗಾಗದೆ ವಿಧಾನಸಭೆ, ಲೋಕಸಭೆ, ಪಂಚಾಯತಿ ಸೇರಿ ಹಲವಾರು ಚುನಾವಣಾ ಕರ್ತವ್ಯಗಳನ್ನು ಲೋಪ-ದೋಷವಿಲ್ಲದೆ ನಿರ್ವಹಿಸಿದ್ದಾರೆ.
ಮೇಲಾಧಿಕಾರಿಗಳು ಹಾಗೂ ಸಹದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇವರು, ಅಂದಿನ ಕೆಲಸವನ್ನು ಅಂದೇ ಮುಗಿಸುತ್ತಿದ್ದರು. ಹೊಸದಾಗಿ ಸೇವೆಗೆ ಸೇರುವ ನೌಕರರು ಇಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರು ನಿರಂತರ ಕಲಿಕೆಯ ಗುಣವನ್ನು ಹೊಂದಿರಬೇಕು.
ಕಚೇರಿ ವೇಳೆಯಲ್ಲಿ ನಿಗಧಿತ ಕಾಲಾವಧಿಯೊಳಗೆ ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಬೇಕು. ಅದೃಷ್ಟವಂತರಿಗೆ ಮಾತ್ರ ಸರ್ಕಾರಿ ನೌಕರಿ ದೊರೆಯುತ್ತದೆ. ಸಿಕ್ಕ ಅವಕಾಶವನ್ನು ಸೇವೆಗಾಗಿ ಮೀಸಲಿಡಬೇಕು ಎಂದು ಮಾರ್ಗದರ್ಶನ ನೀಡಿದರಲ್ಲದೆ, ಮಂಜುನಾಥ ಅವರು ತಮ್ಮ ಪ್ರಾಮಾಣಿಕ ಸೇವೆಯಿಂದ ಮೇಲಾಧಿಕಾರಿಗಳ ನಂಬಿಕೆ ಗಳಿಸಿಕೊಂಡಿದ್ದರು.
ಇವರ ನಿವೃತ್ತಿ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ವಯೋ ನಿವೃತ್ತಿ ಹೊಂದಿದ ಮಂಜುನಾಥ ಅವರು ತಮ್ಮ ಸೇವಾವಧಿಯ ಅನುಭವ, ನೆನಪುಗಳನ್ನು ಮೆಲುಕು ಹಾಕುತ್ತಾ, ಸರ್ಕಾರಿ ಸೇವೆಯಲ್ಲಿ ಕೆಲಸವನ್ನು ಪ್ರೀತಿಸಬೇಕು.
ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳಬಾರದು ಎಂದು ಹೇಳಿದರಲ್ಲದೆ, ಸೇವೆಗೆ ಸೇರಿದ ಹೊಸದರಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆಯನ್ನು ರೂಢಿಸಿಕೊಂಡಲ್ಲಿ ಹೊಸ ವಿಷಯಗಳನ್ನು ಕಲಿತು ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಸೇವೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಅಗತ್ಯ. ಇದರಿಂದ ಕೆಲಸದಲ್ಲಿ ನೈಪುಣ್ಯತೆ, ಕೌಶಲ್ಯಗಳನ್ನು ಅಳವಡಿಸಿಕೊಳ್ಳಬಹುದು.
ಯಾವುದೇ ಸರ್ಕಾರಿ ನೌಕರ ತಮ್ಮ ಮೇಲಾಧಿಕಾರಿ ಹಾಗೂ ಸಹದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಮಾರು ೨೧ ಜಿಲ್ಲಾಧಿಕಾರಿಗಳ ಅಧೀನದಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರಿಂದ ಹೊಸ ಹೊಸ ವಿಚಾರಗಳನ್ನು ತಿಳಿಯಲು ಅವಕಾಶವಾಯಿತು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್, ಮುಜರಾಯಿ ತಹಶೀಲ್ದಾರ್ ಸವಿತ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅನಂತರಾಮು, ಮಹಾನಗರಪಾಲಿಕೆ ಚುನಾವಣಾ ಶಾಖೆಯ ನಾಗಭೂಷಣ್, ಕಂದಾಯ ಮುಖ್ಯ ಸಹಾಯಕ ಲೋಕೇಶ್, ಕಂದಾಯ ಮುಖ್ಯ ಮುನ್ಷಿ ನರಸಿಂಹರಾಜು,
ಚುನಾವಣಾ ಶಾಖೆಯ ರವಿಕುಮಾರ್, ಸೇರಿದಂತೆ ಮತ್ತಿತರ ಸಹದ್ಯೋಗಿಗಳು ಮಂಜುನಾಥ್ ಅವರೊಂದಿಗಿನ ಒಡನಾಟಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಂಜುನಾಥ್ ಮತ್ತು ಪತ್ನಿ ಸತ್ಯವತಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಚುನಾವಣಾ ತಹಶೀಲ್ದಾರ್ ರೇಷ್ಮಾ ಸ್ವಾಗತಿಸಿದರು. ಮೋಹನ್ ಕುಮಾರ್ ವಂದಿಸಿದರು.