ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ 15 ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿಯಲ್ಲಿ 15 ಉಪನ್ಯಾಸಗಳು ಹಾಗೂ ಐದು ಕ್ಷೇತ್ರಗಳಾದ ಜೈವಿಕ ಗೊಬ್ಬರಗಳ ಉತ್ಪಾದನೆ ಘಟಕ ಮತ್ತು ಮೂಡಿಗೆರೆಯಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ವಿವಿಧ ವಿಭಾಗಗಳು, ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ. ಈ ತರಬೇತಿಯ ಕ್ಷೇತ್ರ ಭೇಟಿಯಲ್ಲಿ ವಿವಿಧ ಪೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಶಿಬಿರಾರ್ಥಿಗಳಿಗೆ ಕ್ಷೇತ್ರದಲ್ಲಿಯೇ ವಿವಿಧ ಬೆಳೆಗಳಲ್ಲಿ ಪ್ರಾಯೋಗಿಕವಾಗಿ ತಿಳಿಸಿ ಕೊಡಲಾಯಿತು ಮತ್ತು ವಿವಿಧ ರೀತಿಯ ಗೊಬ್ಬರ ಉತ್ಪಾದನೆ ಘಟಕಗಳು ಹಾಗೂ ಗೊಬ್ಬರ ಕಲಬೆರಕೆ, ಮಣ್ಣು ಪರೀಕ್ಷೆಯ ಬಗ್ಗೆ ತಿಳಿಸಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 15 ಸಂಪನ್ಮೂಲ ವ್ಯಕ್ತಿಗಳು 15 ದಿನಗಳ ವರೆಗೆ ಬೆಳೆಗಳ ಉತ್ಪಾದನೆಯಲ್ಲಿ ಸಮಗ್ರ ಪೋಷಕಾಂಶಗಳ ಮಹತ್ವ ಪೋಷಕಾಂಶ ಕೊರತೆಯ ಲಕ್ಷಣಗಳು, ಮಣ್ಣು ಪರೀಕ್ಷೆ ಹಾಗೂ ಬೆಳೆ ಸ್ಪಂದನೆ ಪ್ರಯೋಜನೆ, ರಸಗೊಬ್ಬರ ನಿಯಂತ್ರಣ ಕಾಯ್ದೆಯ ಉದ್ದೇಶಗಳು ಕುರಿತು ವಿವಿಧ ಉಪನ್ಯಾಸಗಳನ್ನು ನೀಡಿದರು.
ತರಬೇತಿ ಆಯೋಜಕರಾದ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಪಿ. ವೀರನಾಗಪ್ಪ ಮಾತನಾಡಿ ಎಲ್ಲಾ ಶಿಬಿರಾರ್ಥಿಗಳಿಗೆ ಕರ್ನಾಟಕದ ಕೃಷಿ ಪರಿಚಯ, ಮಣ್ಣಿನ ಉತ್ಪತ್ತಿ, ಮಣ್ಣಿನ ಪಾರ್ಶ್ವ ದೃಶ್ಯ, ಪದರಗಳು, ಮಣ್ಣಿನ ಜೈವಿಕ ಬೌತಿಕ ಹಾಗೂ ರಾಸಾಯನಿಕ ಗುಣಗಳು ಕರ್ನಾಟಕದ ವಿವಿಧ ರೀತಿಯ ಮಣ್ಣುಗಳು, ಕೃಷಿ ಬೆಳೆಗಳಲ್ಲಿ ಪೋಷಕಾಂಶಗಳ ಪಾತ್ರ ಪೋಷಕಾಂಶವನ್ನು ಪೂರೈಕೆ ಮಾಡಲು ಬೇಕಾಗುವ ಎಲ್ಲಾ ರೀತಿಯ ಸಾವಯವ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು ಹಾಗೂ ರಾಸಾಯನಿಕ ಗೊಬ್ಬರಗಳ ಲೆಕ್ಕಾಚಾರ ಮತ್ತು ಸಿದ್ದಗಣಿತ ಇವುಗಳ ಜೊತೆಗೆ ಮಣ್ಣಿನ ಫಲವತ್ತತೆ, ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರ ನಿರ್ವಹಣೆಯ ವಿಷಯಗಳ ಕುರಿತು ಹಲವಾರು ತಜ್ಞರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿ,
ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು, ನ್ಯಾನೋ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳಲ್ಲಿ ಕಲಬೆರಿಕೆ ಕಂಡುಹಿಡಿಯುವ ವಿಧಾನಗಳು, ಹನಿ ರಸಾವರಿ ತಾಂತ್ರಿಕತೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಸಂವಹನ ಕೌಶಲ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಸುಧೀರ್ಘ ಉಪನ್ಯಾಸ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಭಾಗವಹಿಸಲು ಇಚ್ಛಿಸುವ ಶಿಬಿರಾರ್ಥಿಗಳು 12500 ವಂತಿಕೆಯನ್ನು ಡಿಡಿ ಮೂಲಕ ಸಂಬಂಧಪಟ್ಟ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಮುಖಾಂತರ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಈ 15 ದಿನಗಳ ಸರ್ಟಿಫಿಕೇಟ್ ಕೋರ್ಸ್ಗೆ ಸೇರ್ಪಡೆಯಾಗಲು ಅವಕಾಶವಿರುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ತಿಳಿಸಿದರು.
ತರಬೇತಿಯ ಸಮಾರೋಪ ಸಮಾರಂಭದಲ್ಲಿ ಡಾ.ಎಂ.ಜೆ.ಚಂದ್ರೇಗೌಡ, ವಿಜ್ಞಾನಿ ಐ.ಸಿ.ಎ.ಆರ್-ಅಟಾರಿ ಭಾಗವಹಿಸಿ ಎಲ್ಲಾ ಶಿಬಿರಾರ್ಥಿಗಳು ವಿಜ್ಞಾನಿಗಳ ನಿಕಟ ಸಂಪರ್ಕದಿಂದ ಮಾತ್ರ ರೈತರಿಗೆ ನೆರವಾಗಲು ಅನುಕೂಲವಾಗುವುದರ ಜೊತೆಗೆ ವ್ಯವಸಾಯದಲ್ಲಿ ನೋಡಿ ಕಲಿ – ಮಾಡಿ ನಲಿ ಎಂಬಂತೆ ನೀವು ರೈತರಾದಲ್ಲಿ ಮಾತ್ರ ಅವರ ಕಷ್ಟ ತಿಳಿಯಲು ಸಾಧ್ಯ ಎಂದರು.