ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಬುದ್ಧ ನಗರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಪೌಷ್ಟಿಕ ದಿನ ಆಚರಣೆ ಮಾಡಲಾಯಿತು.
ತಾಯಂದಿರಿಗೆ, ಗರ್ಭಿಣಿ ಬಾಣಂತಿಯರಿಗೆ, ಪೌಷ್ಟಿಕ ಆಹಾರ ಮತ್ತು ಲಸಿಕೆಗಳ ಬಗ್ಗೆ, ಬಾಲ್ಯ ವಿವಾಹದ ಬಗ್ಗೆ, ನಂತರ ಲಾರ್ವಾ ಉತ್ಪತ್ತಿ ತಾಣಗಳ ನಿಯಂತ್ರಣ ಬಗ್ಗೆ ತಿಳಿಸಲಾಯಿತು. ಯಾವುದೇ ರೀತಿಯ ಕುಟುಂಬ ಕಲ್ಯಾಣ ವಿಧಾನಗಳ ಅನುಸರಿಸದೇ ಇರುವವರನ್ನು ಮನವೊಲಿಸಿ, ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಪ್ರೇರೇಪಿಸಲು ಕುಟುಂಬದ ಸದಸ್ಯರಿಗೆ ತಿಳಿಸಲಾಯಿತು.
ಬುದ್ಧ ನಗರದ ವೈದ್ಯಾಧಿಕಾರಿ ಡಾ.ಸುರೇಂದ್ರ ಮಾತನಾಡಿ, ತಮ್ಮ ಮನೆಯ ಸುತ್ತಮುತ್ತ ಲಾರ್ವಾ ಉತ್ಪತ್ತಿ ತಾಣ ಪತ್ತೆ ಹಚ್ಚಿ ನಿರ್ಮೂಲನೆ ಮಾಡಲು ತಿಳಿಸಿದರು. ಮನೆಯ ಆವರಣದ ಸುತ್ತ ಇರುವ ಬಾಟಲಿ, ಹೊಡೆದ ಗಾಜು, ಎಳನೀರು ಚಿಪ್ಪು ಮಡಿಕೆಯ ತುಂಡು ಮುಂತಾದವುಗಳನ್ನು ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ಮಾತನಾಡಿ, ನಮ್ಮ ಸುತ್ತಮುತ್ತ ಲಭ್ಯವಿರುವ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳು, ಕಾಳುಗಳು ಬಳಸಿಕೊಂಡು ಆಹಾರ ತಯಾರಿಸುವುದರಿಂದ ಪೌಷ್ಟಿಕಾಂಶ ಕೊರತೆ ನೀಗಿಸಬಹುದು. ಬೇರೆ ಬೇರೆ ಸಿರಿಧಾನ್ಯ ಬಳಸುವುದನ್ನು ರೂಢಿ ಮಾಡಿಕೊಂಡು ಮಧುಮೇಹ, ರಕ್ತದೊತ್ತಡ ಮುಂತಾದ ಅಸಾಂಕ್ರಮಿಕ ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಉಷಾ, ಆಶಾ ಕಾರ್ಯಕರ್ತೆಯರು ಇದ್ದರು.