ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಪ್ರವಾಸ ಕೈಗೊಂಡಿರುವ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಹಾಗೂ ಸದಸ್ಯರುಗಳ ತಂಡ ಡಿ.30 ರಂದು ತಮಟಕಲ್ಲು ರಸ್ತೆಯಲ್ಲಿನ ಮೆದೇಹಳ್ಳಿಯ ಅಲ್ಪಸಂಖ್ಯಾತರ ಬಾಲಕ ಹಾಗೂ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಭೇಟಿ ಪರಿಶೀಲಿಸಿತು. ಈ ವೇಳೆ ಆಹಾರ ಪದಾರ್ಥಗಳ ಸರಬರಾಜಿನ ಅಸಮರ್ಪಕ ನಿರ್ವಹಣೆ ಸಂಬಂಧಿಸಿದಂತೆ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಹಾಸ್ಟೆಲ್‍ನಲ್ಲಿ ನಿಯಮ ಪಾಲನೆ ಕೊರತೆ:
ವಸತಿ ಶಾಲೆಗೆ ಸರ್ಕಾರದಿಂದ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತಿದೆ. ಗೋದಿ, ತೊಗರಿ, ಎಣ್ಣೆ, ತರಕಾರಿ ಸೇರಿದಂತೆ ಉಳಿದ ಸಾಮಗ್ರಿಗಳನ್ನು ಟೆಂಡರ್ ಮೂಲಕ ಪಡೆದುಕೊಳ್ಳಬೇಕು. ಗುತ್ತಿಗೆ ಪಡೆದವರು ವಾಹನದ ಮೂಲಕ ನೇರವಾಗಿ ವಸತಿ ಶಾಲೆಗೆ ಈ ಸಾಮಗ್ರಿಗಳನ್ನು ಸರಬರಾಜು ಮಾಡಬೇಕು. ನಿಯಮಾನುಸಾರ ಗುತ್ತಿಗೆದಾರರು ನೀಡುವ ಸಾಮಗ್ರಿಗಳನ್ನು ಜಿ.ಪಿ.ಎಸ್. ಫೋಟೋ ಹಾಗೂ ತೂಕವನ್ನು ಪರಿಶೀಲಿಸಿ ವಾರ್ಡ್‍ನ್ ಪಡೆದುಕೊಳ್ಳಬೇಕು. ಈ ನಿಯಮ ವಸತಿ ಶಾಲೆಯಲ್ಲಿ ಪಾಲನೆಯಾಗುತ್ತಿಲ್ಲ. ಅಡುಗೆ ತಯಾರಿಕೆಗೆ ಬೇಕಾದ ಆಹಾರ ಪದಾರ್ಥಗಳನ್ನು ವಾರ್ಡ್‍ನ್‍ಗಳು ಸ್ವಃತ ಖರೀದಿ ಮಾಡಿಕೊಂಡು ಬರುತ್ತಾರೆ. ಹೀಗೆ ತಂದ ಸಾಮಗ್ರಿಗಳಿಗೆ ಯಾವುದೇ ತೂಕ, ಅಳತೆಯ ನಿಖರತೆಯಿಲ್ಲ. ಜಿ.ಪಿ.ಎಸ್ ಫೋಟೋ ಇಲ್ಲದೆಯೇ ಅಧಿಕಾರಿಗಳು ಟೆಂಡರ್‍ದಾರರಿಗೆ ಬಿಲ್ ಪಾವತಿಸಿದ್ದಾರೆ. ಆಯೋಗದ ಭೇಟಿಯ ವೇಳೆ ಈ ಲೋಪ ಕಂಡು ಬಂದಿದೆ ಎಂದು ತಿಳಿಸಿದರು.
ಮಕ್ಕಳಿಗೆ ಅಸಮರ್ಪಕ ಊಟ:
ವಸತಿ ಶಾಲೆಯಲ್ಲಿನ ಮಕ್ಕಳಿಗೆ ಅಸಮರ್ಪಕವಾಗಿ ಊಟ ನೀಡಲಾಗುತ್ತಿದ್ದು, ಮಕ್ಕಳು ಹೆಚ್ಚಿನ ಚಪಾತಿ ಕೇಳಿದರೆ ವಾರ್ಡ್‍ನ್ ಹಾಗೂ ಅಡುಗೆ ಸಿಬ್ಬಂದಿ ನೀಡುತ್ತಿಲ್ಲ. ಆಹಾರ ಸಿದ್ಧಪಡಿಸುವಲ್ಲಿ ಯಾವುದೇ ಗುಣಮಟ್ಟ ಹಾಗೂ ಶುಚಿತ್ವನ್ನು ಕಾಪಾಡಿಕೊಳ್ಳುತ್ತಿಲ್ಲ. ವಸತಿ ಶಾಲೆಗೆ ನವೆಂಬರ್ 26 ರಂದು 237 ಕ್ವಿಂಟಾಲ್ ಅಕ್ಕಿ ಸರಬರಾಜು ಆಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಕ್ಕಿ ಬಳಸಬೇಕು. ತಿಂಗಳಿಗೆ 35 ರಿಂದ 40 ಕ್ವಿಂಟಾಲ್ ಅಕ್ಕಿ ಖರ್ಚಾಗಬೇಕು. ಈ ಲೆಕ್ಕದ ಪ್ರಕಾರ ಡಿ.30ಕ್ಕೆ ಗೋದಾಮಿನಲ್ಲಿ 187 ಕ್ವಿಂಟಾಲ್ ಅಕ್ಕಿ ಉಳಿದಿರಬೇಕಿತ್ತು, ಆದರೆ 225 ಕ್ವಿಂಟಾಲ್ ಅಕ್ಕಿ ಉಳಿದಿದೆ. ಇದರ ಅರ್ಥ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಸಿದ್ದಪಡಿಸಿಲ್ಲ. ಬೇಳೆ, ಗೋಧಿ, ಬೆಲ್ಲ, ಎಣ್ಣೆ, ತರಕಾರಿ ಸೇರಿದಂತೆ ಯಾವುದನ್ನು ಸಹ ನಿಗದಿತ ಪ್ರಮಾಣದಲ್ಲಿ ಬಳಸುತ್ತಿಲ್ಲ. ನಿಗದಿತ ಪ್ರಮಾನದಲ್ಲಿ ಚಿಕನ್ ಆಹಾರ ನೀಡುತ್ತಿಲ್ಲ, ಎಂಬುದಾಗಿ ಅಸಮರ್ಪಕ ಊಟ ಪೂರೈಕೆ ಕುರಿತು ಮಕ್ಕಳು ಆಯೋಗದ ಮುಂದೆ ಆರೋಪ ಮಾಡಿದ್ದಾರೆ ಎಂದರು.
ಭೇಟಿ ನೀಡದ ಜಿಲ್ಲಾ ಮಟ್ಟದ ಅಧಿಕಾರಿ:
ಜಿಲ್ಲಾ ಮಟ್ಟದ ಅಧಿಕಾರಿ ತಿಂಗಳಿಗೊಮ್ಮೆ, ತಾಲ್ಲೂಕು ಮಟ್ಟದ ಅಧಿಕಾರಿ ಎರಡು ಬಾರಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ. ಆದರೆ ನಗರಕ್ಕೆ ಸಮೀಪವಿರುವ ಶಾಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಸಮರ್ಪಕವಾಗಿ ಭೇಟಿ ನೀಡಿಲ್ಲ. ವಸತಿ ಶಾಲೆಯಲ್ಲಿ ಅಧಿಕಾರಿಗಳ ಭೇಟಿ ವಹಿಯನ್ನೇ ನಿರ್ವಹಣೆ ಮಾಡಿಲ್ಲ. ಶಾಲೆಯಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ವಿತರಿಸಿಲ್ಲ. ಮಕ್ಕಳ ಆರೋಗ್ಯ ತಪಾಸಣೆ ಸಹ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ಆಯೋಗದ ಸದಸ್ಯ ಮಾರುತಿ ಎಂ.ದೊಡ್ಡಲಿಂಗಣ್ಣವರ ತಿಳಿಸಿದರು.
ಅಧಿಕಾರಿಗಳ ಸ್ಪಷ್ಟನೆ ಕೋರಿದ ಆಯೋಗ:
ಮಕ್ಕಳಿಗೆ ಎರಡು ಚಪಾತಿ ಮಾತ್ರ ನೀಡಬೇಕು ಎಂಬ ನಿಯಮ ಎಲ್ಲೂ ಇಲ್ಲ. ಹೆಚ್ಚುವರಿಯಾಗಿ ಮಕ್ಕಳು ಚಪಾತಿ ಹೇಳಿದರೆ ತಪ್ಪದೇ ನೀಡಬೇಕು. ಮಕ್ಕಳಿಗೆ ಅರೆಹೊಟ್ಟೆ ಊಟ ನೀಡಬಾರದು. ಆಹಾರ ಪದಾರ್ಥಗಳನ್ನು ಟೆಂಡರ್‍ದಾರಿಂದಲೇ ಪಡೆದುಕೊಳ್ಳಬೇಕು. ಜಿ.ಪಿ.ಎಸ್ ಫೋಟೋ ಆಧರಿಸಿಯೇ ಗುತ್ತಿಗೆದಾರರ ಬಿಲ್ ಪಾವತಿ ಮಾಡಬೇಕು ಎಂದು ಆಯೋಗದಿಂದ ನಿರ್ದೇಶನ ನೀಡಲಾಗಿದೆ. ನ್ಯೂನ್ಯತೆಗಳ ಬಗ್ಗೆ ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳಿಂದ ಸ್ಪಷ್ಟನೆ ಕೋರಲಾಗಿದೆ ಎಂದು ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್.ಕೃಷ್ಣ ತಿಳಿಸಿದರು.
ಭೇಟಿ ವೇಳೆ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಕೆ.ಎಸ್.ವಿಜಯಲಕ್ಷ್ಮೀ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

