ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮನುಷ್ಯರ ಪ್ರಯತ್ನ ದೈವಿ ಕೃಪೆಯ ಫಲವಾಗಿ ಅವಳಿ ಯೋಜನೆಯ ಜಗಳೂರು ಕ್ಷೇತ್ರದ 57 ಕೆರೆಗಳು, ಭರಮಸಾಗರದ ವ್ಯಾಪ್ತಿಯ ಕೆರೆಗಳು ನದಿಯ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಇದಕ್ಕೆ ತುಪ್ಪದಹಳ್ಳಿಯ ಕೆರೆಯು ಹಳ್ಳದ ರೀತಿಯಲ್ಲಿ
ಹರಿಯದೇ ನದಿಯ ನೀರಾಗಿ ಹರಿಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬಣ್ಣಿಸಿದರು.
ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತುಪ್ಪದಹಳ್ಳಿ ಕೆರೆಗೆ ಶ್ರೀ ಜಗದ್ಗುರುಗಳವರು ಬಾಗಿನ ಅರ್ಪಿಸಿದ ನಂತರ ತುಪ್ಪದಹಳ್ಳಿ, ಹೆಮ್ಮನಬೇತೂರು, ಬಿಳಿಚೋಡು,ಅಸಗೋಡು ಕುರುಡಿ ಸೇರಿದಂತೆ ಸುತ್ತ–ಮುತ್ತಲಿನ ಪ್ರದೇಶದ ರೈತರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿ ಸ್ವಾಮೀಜಿ ಮಾತನಾಡಿದರು.
ಮೊಬೈಲ್ ನೆಟ್ ವರ್ಕ್ ತರ ನೀರಿನ ನೆಟ್ವರ್ಕ್ಇದೆ. ಶಾಂತಿವನದ ಜಲಾಶಯ ಕೋಡಿ ಬಿದ್ದರೆ ಭರಮಸಾಗರ ಕೆರೆ ತುಂಬಿದರೆ, ತುಪ್ಪದಹಳ್ಳಿ ಕೆರೆ ತುಂಬಿದ ನಂತರ ಜಗಳೂರಿನಿಂದ ಹರಪನಹಳ್ಳಿ ತಾಲ್ಲೂಕಿನ ಮಾರ್ಗವಾಗಿ ಡಿ.ಬಿ.ಡ್ಯಾಂಗೆ ನೀರು ಹರಿದು ಹೋಗುತ್ತದೆ ಎಂದರು.
ದಾವಣಗೆರೆ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ನೀರು ತುಂಬಿಸುವ ಯೋಜನೆಗೆ ಹೊಸ ಪೈಪಲೈನ್ ಅಳವಡಿಸುವ ಯೋಜನೆಗೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕೊಡಲು ಸೂಚಿಸಿದ್ದು, ತಕ್ಷಣವೇ ಪೂರ್ಣವಾಗಿ ಹಾಳವಾಗಿರುವ ಹಲವು ಪೈಪ್ಗಳನ್ನು ತೆರುವುಗೊಳಿಸಿ ಅಲ್ಲಿ ತುರ್ತಾಗಿ ಹೊಸ ಪೈಪ್ಗಳನ್ನು ಹಾಕಿ ನೀರು ಹರಿಸಲು ತಿಳಿಸಲಾಗಿದೆ.
ಜಗಳೂರು ಹಾಗೂ ಭರಮಸಾಗರದ ಎರಡು ಅವಳಿ ನೀರಾವರಿ ಯೋಜನೆಗಳಿಂದ ಬತ್ತಿರುವಕೆರೆಗಳಿಗೆ ಜಲಸಿರಿಯಾಗಿ ನೀರು ಬಂದಿದೆ. ನೀರಿಗಾಗಿ ಹಂಬಲಿಸಿದ ಜನರಿಗೆ ಜಲದಾರೆಯಾಗಿ ಗಂಗೆ ಬಂದಿದ್ದಾಳೆ ಎಂದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ಜಗಳೂರು ಕೆರೆ ನೀರು ತುಂಬಿಸವ ಯೋಜನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ಸರ್ಕಾರಗಳು, ಕ್ಷೇತ್ರದ ಮೂವರು ಶಾಸಕರು ಕೆಲಸ ಮಾಡಿದರೆ ಸಿರಿಗೆರೆ ಶ್ರೀ ಒಬ್ಬರೇ ನೇತೃತ್ವ ವಹಿಸಿದ್ದರ ಫಲವಾಗಿ 57 ಕೆರೆಗಳಿಗೆ ತುಂಗೆ ಭದ್ರೆಯಿಂದ ನೀರು ಬಂದಿದ್ದು, ರೈತರಾದ ನಾವುಗಳು ಸದ್ದಳಿಕೆ ಮಾಡಿಕೊಂಡು ಬದುಕು ಬಂಗಾರ ಮಾಡಿಕೊಳ್ಳಬೇಕೆಂದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಸಿರಿಗೆರೆ ಶ್ರೀಗಳು ಆಧುನಿಕ ಜಲ ಭಗೀರಥರು. ಜಗಳೂರು ಕ್ಷೇತ್ರದ ಕೆರೆಗಳಿಗೆ ನೀರು ಬರುವಂತೆ ಮಾಡಿ ನೀರಾವರಿ ಪ್ರದೇಶ ಮಾಡಿಕೊಟ್ಟಿದ್ದಾರೆ. ಹತ್ತಿ, ಮೆಕ್ಕೇಜೋಳ, ರಾಗಿ, ಬೆಳೆಯುವ ಬಯಲು ಪ್ರದೇಶದಲ್ಲಿ ಮುಂದೆ ನೀರಾವರಿ ಪ್ರದೇಶವಾಗಿ ಮಾರ್ಪಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಲವು ಊರಿನ ಮುಖಂಡರು, ಶ್ರೀಮಠದ ಭಕ್ತರು ಸೇರಿದಂತೆ ಮತ್ತಿತರರು ಹಾಜರಿದ್ದರು.