ಹೆಸರಿಗಷ್ಟೇ ಹೆದ್ದಾರಿ ಸರ್ವಿಸ್ ರಸ್ತೆ, ಸಮಸ್ಯೆಗಳ ಆಗರ, ಕಣ್ಮುಚ್ಚಿ ಕೂತ ಅಧಿಕಾರಿಗಳು

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ
ಚಂದ್ರವಳ್ಳಿ ನ್ಯೂಸ್
, ಹಿರಿಯೂರು:
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿಗೆ ಸಮಾನಾಂತರವಾಗಿ ನಿರ್ಮಿಸಿರುವ ಸರ್ವಿಸ್‌ರಸ್ತೆ ಹೆಸರಿಗಷ್ಟೇ ದ್ವಿಪಥವಾಗಿದ್ದು ಅತ್ಯಂತ ಕಿರಿದಾಗಿದೆ. ಈ ಸರ್ವಿಸ್ ರಸ್ತೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸೌಲಭ್ಯ ನೀಡಿಲ್ಲ. ಸರ್ವಿಸ್‌ರಸ್ತೆಯ ಬದಿಯಲ್ಲಿ ಘನ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ.

ಕಸ, ಕಡ್ಡಿ, ಹಳೆ ಮನೆ ಕಿತ್ತ ಮಣ್ಣು ಕಲ್ಲು, ಕಸ, ಕಡ್ಡಿ ಹಾಕುವ ತಾಣವಾಗಿ ಸರ್ವಿಸ್ ರಸ್ತೆ ಬದಿ ಮಾರ್ಪಟ್ಟಿದೆ. ಇನ್ನೂ ಸರ್ವಿಸ್ ರಸ್ತೆಯ ಬದಿಯಲ್ಲಿ ಸೀಮೆ ಜಾತಿ ಗಿಡ, ಮರಗಳು ಬೆಳೆದು ಸಾಕಷ್ಟು ಅನಾಹುತ ಸೃಷ್ಠಿಸುತ್ತಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ನೀಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಕೆಲಸ ಎಂದರೆ ಟೋಲ್ ಸಂಗ್ರಹಕ್ಕೆ ಮಾತ್ರ ಸೀಮಿತ ಎನ್ನುವಂತಾಗಿರುವುದು ಪ್ರಯಾಣಿಕರ ದುರ್ದೈವವಾಗಿದೆ.

- Advertisement - 

ಏನಿದು ಸರ್ವಿಸ್ ರಸ್ತೆ?
ಹೆದ್ದಾರಿ ಸರ್ವಿಸ್ ರಸ್ತೆ ಎಂದರೆ ಮುಖ್ಯ ಹೆದ್ದಾರಿಗೆ ಸಮಾನಾಂತರವಾಗಿ ನಿರ್ಮಿಸಲಾದ ಹೆದ್ದಾರಿ ಪಕ್ಕದ ರಸ್ತೆಯಾಗಿದೆ.
ಈ ಸರ್ವಿಸ್ ರಸ್ತೆಯನ್ನು ಸ್ಥಳೀಯ ಸಂಚಾರ
, ನಗರ ಪ್ರದೇಶಗಳ ವಾರ್ಡ್ ಅಥವಾ ಬಡಾವಣೆಗಳಿಗೆ ಸಂಚರಿಸುವ ಸಂಪರ್ಕ ರಸ್ತೆ, ಗ್ರಾಮಗಳ ಸಂಪರ್ಕ ಹಾಗೂ ಹೆದ್ದಾರಿಯ ಪ್ರವೇಶ-ನಿರ್ಗಮನ ದ್ವಾರಗಳ ಬಳಿ ವಾಹನಗಳು ಹೆದ್ದಾರಿಗೆ ಸೇರಲು ಅಥವಾ ಹೆದ್ದಾರಿಯಿಂದ ಹೊರಬರಲು ಸರ್ವಿಸ್ ರಸ್ತೆ ಸಹಾಯ ಮಾಡುತ್ತದೆ.

ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ಸಣ್ಣ ವ್ಯಾಪಾರಗಳ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತದೆ. ಇದರಿಂದ ವೇಗದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ ಮತ್ತು ಅಪಘಾತಗಳ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವ ಭಾವನೆ ಮಾಯವಾಗಿದ್ದು ಸಾಕಷ್ಟು ಸಮಸ್ಯೆಯನ್ನು ಸರ್ವಿಸ್ ರಸ್ತೆ ತಂದೊಡ್ಡಿದೆ.

- Advertisement - 

ಹೆದ್ದಾರಿಯ ಮುಖ್ಯ ರಸ್ತೆ(ಲೇನ್‌)ಗಳನ್ನು ಬಳಸದೆ ಸ್ಥಳೀಯ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳು ಸಂಚರಿಸುವ ಸಲುವಾಗಿ ನಿರ್ಮಿಸಿದ್ದರೂ ಅದು ಉಪಯೋಗಕ್ಕೆ ಬಾರದ ರೀತಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಯಾವುದೇ ರೀತಿಯಿಂದಲೂ ನಿರ್ವಹಣೆ ಇಲ್ಲದೆ ಸಮಸ್ಯೆಗಳ ಆಗರವಾಗಿದೆ.

ಹೆದ್ದಾರಿಗೆ ಸೇರಲು ಅಥವಾ ಹೆದ್ದಾರಿಯಿಂದ ಹೊರ ಬರಲು ಸುರಕ್ಷಿತ ಸ್ಥಳ ಒದಗಿಸುವುದು ಹೆದ್ದಾರಿ ಪ್ರಾಧಿಕಾರದ ಆದ್ಯ ಕರ್ತವ್ಯ. ರೈತರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ.
ಸಮಸ್ಯೆಗಳು:

ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆಗಳ ಅಗಲ, ಕೆಳ ಸೇತುವೆ, ಪಾದಚಾರಿಗಳ ದಾರಿ ನಿರ್ಮಾಣವು ವೈಜ್ಞಾನಿಕವಾಗಿದೆ.

ಹೆದ್ದಾರಿ ಸರ್ವಿಸ್ ರಸ್ತೆಗಳ ಅದ್ವಾನದ ಬಗ್ಗೆ ಜನರು ಸಾಕಷ್ಟು ದೂರುಗಳನ್ನು ಹೇಳುತ್ತಿದ್ದಾರೆ. ಸರ್ವಿಸ್ ರಸ್ತೆಯಲ್ಲಿನ ಜಾಲಿಯ ಮುಳ್ಳಿನ ಗಿಡಮರಗಳ ಅಡೆತಡೆಗಳು ಒಂದು ಕಡೆಯಾದರೆ ಕೆಳ ಸೇತುವೆಗಳು ಹೆದ್ದಾರಿಗಳ ನಿರ್ಜನತೆ ಹಾಗೂ ಅಕ್ರಮ ಚಟುವಟಿಕೆಗಳ ನಡೆಯುವ ತಾಣವಾಗಿವೆ.

ಹೆದ್ದಾರಿ ಪಕ್ಕದ ನಗರ, ಬಡಾವಣೆ, ವಾರ್ಡ್, ಗ್ರಾಮಗಳ ಜನತೆ ಸರ್ವಿಸ್ ರಸ್ತೆಗಳಿಂದ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಯಾಣಿಕರು, ಸಾರ್ವಜನಿಕರ ದೂರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಸರ್ವಿಸ್ ರಸ್ತೆ ನಿರ್ವಹಣೆ ಶೂನ್ಯ:
ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಮುಳ್ಳಿನ ಗಿಡ, ಮರಗಳು ಸರ್ವಿಸ್ ರಸ್ತೆ ಆಪೋಷನ ಪಡೆದುಕೊಂಡಿವೆ. ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಗಳ ಸರ್ವಿಸ್ ರಸ್ತೆಗಳ ಸಮಸ್ಯೆಗಳು ಸಾಕಷ್ಟಿದ್ದು ಆ ಸಮಸ್ಯೆಗಳ ಪರಿಹಾರ ಮಾಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ.
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ತುಂಬಾ ಹಾಳಾಗಿದ್ದು ಸರಿಪಡಿಸದಿರುವುದು ವಿಷಾದದ ಸಂಗತಿ.

ಹಿರಿಯೂರು ನಗರದ ಟಿಬಿ ವೃತದ ಪ್ರವಾಸಿ ಮಂದಿರದಿಂದ  ಮಾರಿಕಣಿವೆ ಸರ್ಕಲ್, ಮ್ಯಾಕ್ಲೂರಹಳ್ಳಿ, ಮೇಟಿಕುರ್ಕೆ ಕಡೆ ಹೋಗುವ ಸರ್ವಿಸ್ ರಸ್ತೆಯ ಬದಿಯಲ್ಲಿ ಕಸ, ಕಡ್ಡಿ, ಘನ ತ್ಯಾಜ್ಯಗಳನ್ನು ತಂದು ರಾಶಿ ರಾಶಿ ಸುರಿಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳು ಗಮನಿಸುತ್ತಿಲ್ಲ. ಅಧಿಕಾರಿಗಳು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದಕ್ಕೆ ಇದು ನಿದರ್ಶನ.

ಸರ್ವಿಸ್ ರಸ್ತೆಯ ಅಕ್ಕಪಕ್ಕದಲ್ಲಿ ಮುಳ್ಳಿನ ಜಾಲಿ ಗಿಡಗಳು ಬೆಳೆದು ರಸ್ತೆ ಆಕ್ರಮಿಸಿದ್ದು ವಾಹನ ಸವಾರರಿಗೆ ಎದುರಿಗೆ ಬರುವರು ಕಾಣುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ವಿಸ್ ರಸ್ತೆಯ ಬದಿಯಲ್ಲಿರುವ ಜಾಲಿ ಗಿಡಗಳನ್ನು ತೆಗೆಸಿ ಅಪಘಾತ ತಪ್ಪಿಸಬೇಕು. ಅಲ್ಲದೆ ಸರ್ವಿಸ್ ರಸ್ತೆ ಬದಿ ಇರುವ ಘನ ತ್ಯಾಜ್ಯ ವಿಲೇ ಮಾಡಿಸಬೇಕು. ಸರ್ವಿಸ್ ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಬೇಕು. ಅಲ್ಲಿಯ ತನಕ ಟೋಲ್ ವಸೂಲಾತಿ ಸ್ಥಗಿತ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

ಹಿರಿಯೂರು ಎಪಿಎಂಸಿ ಸಮೀಪದ ಅಂಡರ್ ಪಾಸ್ ರಸ್ತೆ, ಟಿಬಿ ವೃತ್ತ, ಸಮೀಪದ ಪಟ್ರೇಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿ ಇರುವ ಅಂಡರ್ ಪಾಸ್ ಸಮಸ್ಯೆ ಎದ್ದು ಕಾಣುತ್ತಿದ್ದರೂ ಸರಿಪಡಿಸದಿರುವುದು ಸೋಜಿಗವಾಗಿದೆ.

ಸರ್ವಿಸ್ ರಸ್ತೆ ಬದಿಗೆ ಘನ ತ್ಯಾಜ್ಯ ಸುರಿಯುತ್ತಿದ್ದಾರೆ. ಕುರಿ ಮಾರ್ಕೆಟ್ ಹತ್ತಿರ ಹಾಗೂ ಪಟ್ರೇಹಳ್ಳಿಯ ಅಂಡರ್ ಪಾಸ್ ಮಳೆ ಬಂದರೆ ನೀರು ತುಂಬಿಕೊಂಡು ವಾಹನ ಸವಾರರು ಸಾಕಷ್ಟು ನರಕಯಾತನೆ ಅನುಭವಿಸಿದ್ದಾರೆ, ಸರ್ವಿಸ್ ರಸ್ತೆಯಲ್ಲಿ ತಗ್ಗು ಗುಂಡಿಗಳ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನ ನೀಡುತ್ತಿಲ್ಲ.

ಸರ್ವಿಸ್ ರಸ್ತೆಯಲ್ಲಿ ಹಲವು ಸಮಸ್ಯೆಗಳನ್ನು ಸರಿಪಡಿಸಿ ಟೋಲ್ ಹಣ ಸಂಗ್ರಹಿಸಲಿ, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸರ್ವಿಸ್ ರಸ್ತೆ ಬದಿಯ ವಿದ್ಯುತ್ ದೀಪಗಳು ಉರಿಯುವುದೇ ಇಲ್ಲ, ಸರ್ವಿಸ್ ರಸ್ತೆಯ ಚರಂಡಿಗಳು ತುಂಬಿದ್ದು ನೀರು ರಸ್ತೆ ಬರುತ್ತಿದೆ. ಸಚಿವರು ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರ ಸಭೆ ಕರೆದು ಸಮಸ್ಯೆಗಳನ್ನು ಹೋಗಲಾಡಿಸಬೇಕು.
ಚಮನ್ ಷರೀಫ್
, ಆದಿವಾಲ ನಿವಾಸಿ.

 

 

Share This Article
error: Content is protected !!
";