ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಶೆಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮು ಬೆಂಕಿಗಾಹುತಿ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜರುಗಿದೆ.
ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ಮಂಗಳವಾರ ಆಯಿಲ್ ಗೋದಾಮಿಗೆ ಬೆಂಕಿ ಬಿದ್ದು ಹೊಗೆ ದಟ್ಟವಾಗಿ ಆವರಿಸಿ ದಾರಿ ಹೋಕರಿಗೆ ಆತಂಕ ಮೂಡಿಸಿರುವ ಘಟನೆಯು ನಡೆದಿದೆ.
ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಎಂಬವರಿಗೆ ಸೇರಿದ ಗೋದಾಮು ಇದಾಗಿದ್ದು ಶೆಲ್ ಕಂಪನಿಗೆ ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಸುಕಿನ ಮೂರು ಗಂಟೆ ವೇಳೆಗೆ ಶೆಲ್‌ಕಂಪನಿಗೆ ಸೇರಿದ ಆಯಿಲ್‌ಗೋದಾಮು ಧಗಧಗನೆ ಹೊತ್ತಿ ಉರಿದಿದ್ದು ನೆಲಮಂಗಲ, ಪೀಣ್ಯ, ಯಶವಂತಪುರ ಭಾಗದ 8ಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ.
ದೊಡ್ಡ ಪ್ರಮಾಣದ ಬೆಂಕಿ ಆವರಿಸಿಕೊಂಡಿದ್ದು ಅಕ್ಕಪಕ್ಕದ ಮನೆಗಳಿಗೆ ಬೆಂಕಿ ತಗುಲುವ ಆತಂಕ ಎದುರಾಗಿದೆ. 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಭಾರತ-ಪಾಕಿಸ್ತಾನ ನಡುವಿನ ಯುದ್ಧ ಆರಂಭ ಹಿನ್ನೆಲೆ ಹೆಚ್ಚಿನ ಸ್ಟಾಕ್ ಶೇಖರಣೆ ಮಾಡಲಾಗಿತ್ತು. ಯುದ್ಧದ ಪರಿಣಾಮವಾಗಿ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಶೇಖರಣೆ ಮಾಡಿತ್ತು. ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಂಗ್ರಹಣೆ ಮಾಡಲಾಗಿತ್ತು ಎನ್ನುವ ಮಾಹಿತಿ ಹೊರ ಬರುತ್ತಿದೆ.