ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ ಮೇ 7 ರಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ನಡೆಯಲಿದ್ದು ಪೂರ್ವ ಸಿದ್ದತೆ ಗಾಗಿ ಮಾನ್ಯ ಜಿಲ್ಲಾಧಿಕಾರಿ ಎ ಬಿ ಬಸವರಾಜು ಸ್ಥಳ ಪರಿಶೀಲನೆ ಮಾಡಿದರು.
ಈಗಾಗಲೇ ನೋಂದಾಯಿಸಿ ಕೊಂಡಿರುವ 67 ಜೋಡಿಗಳು ವಿವಾಹವಾಗಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಧೀರಜ್‌ಮುನಿರಾಜು, ಶರತ್ ಕುಮಾರ್ ಬಚ್ಚೇಗೌಡ, 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಸಂಸದ ಡಾ.ಕೆ.ಸುಧಾಕರ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್ ಕಂದಾಯ ನಿರೀಕ್ಷಕ ನರಸಿಂಹ ಮೂರ್ತಿ ಸಮಾಜ ಸೇವಕ ಮುತ್ತಣ್ಣ ಇತರರು ಹಾಜರಿದ್ದರು.