ಚಿತ್ರದುರ್ಗದಲ್ಲಿ ಮೇ.8 ರಂದು ಜನಾಕ್ರೋಶ ಯಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಹೊರ ಹಾಕುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿರುವುದರಿಂದ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡು ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ೨೬ ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕಲು ದೇಶದ ಪ್ರಧಾನಿ ಕೈಗೊಂಡಿರುವ ಐದು ನಿರ್ಣಯಗಳಿಗೆ ನಮ್ಮ ಬೆಂಬಲವಿದೆ. ಭಯೋತ್ಪಾದನೆಯನ್ನು ತಡೆಯಲು ಭಾರತದೊಂದಿಗೆ ಬೇರೆ ದೇಶಗಳು ಕೈಜೋಡಿಸಿವೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟು ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುವ ಕೇಂದ್ರದ ತೀರ್ಮಾನಕ್ಕೆ ದೇಶದ ಪ್ರತಿಯೊಬ್ಬರ ಒಪ್ಪಿಗೆಯಿದೆ ಎಂದರು.

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಆರಂಭಗೊಂಡಿರುವ ಜನಾಕ್ರೋಶ ಯಾತ್ರೆ ಮೇ.೮ ರಂದು ಸಂಜೆ ನಾಲ್ಕು ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಲಿದೆ. ಮಾಜಿ ಸಚಿವ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಅನೇಕ ಮುಖಂಡರುಗಳು ಯಾತ್ರೆಯಲ್ಲಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾವನಾತ್ಮಕ ಸಮಸ್ಯೆಗಳನ್ನು ಸೃಷ್ಟಿಸಿ ಮತ ಬ್ಯಾಂಕನ್ನಾಗಿ ಮಾಡಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದರೂ ಯಾವುದೇ ಅಭಿವೃದ್ದಿಯಾಗಿಲ್ಲ.

ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಅನೇಕರು ಬಲಿಯಾಗಿದ್ದಾರೆ. ಪದವೀಧರರಿಗೆ ತಿಂಗಳಿಗೆ ಮೂರು ಸಾವಿರ ರೂ. ಡಿಪ್ಲೋಮಾ ಪಡೆದವರಿಗೆ ಒಂದುವರೆ ಸಾವಿರ ರೂ.ಗಳನ್ನು ನೀಡುವುದಾಗಿ ಆಸೆ ತೋರಿಸಿ ವಂಚಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ಬಚ್ಚಿಟ್ಟು ಒಳ ಮೀಸಲಾತಿಗಾಗಿ ಮತ್ತೊಮ್ಮೆ ಜಾತಿ ಗಣತಿ ಆರಂಭಿಸಿರುವುದರಲ್ಲಿ ಅರ್ಥವಿಲ್ಲ. ಸರ್ವೆ ಕಾರ್ಯದ ಜೊತೆ ಕಮಿಟಿ ರಚಿಸಿರುವುದು ಏಕ ಪಕ್ಷೀಯವಾಗಿದೆ. ಸಮನ್ವಯ ಸಮಿತಿ ಸರಿಪಡಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿ ಆರಂಭಿಸಿರುವುದನ್ನು ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆರವರ ಒತ್ತಡಕ್ಕೆ ಮಣಿದು ಗಣತಿ ನಡೆಸುತ್ತಿದೆ ಎಂದು ಅಪ ಪ್ರಚಾರದಲ್ಲಿ ತೊಡಗಿದ್ದಾರೆ. ಅವಕಾಶ ವಂಚಿತ ಸಮುದಾಯಗಳನ್ನು ಗುರುತಿಸಿ ಸೌಲಭ್ಯ ಒದಗಿಸುವುದು ಕೇಂದ್ರದ ಜಾತಿ ಗಣತಿ ಉದ್ದೇಶ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಎಂಟರಂದು ಸಂಜೆ ನಾಲ್ಕು ಗಂಟೆಗೆ ಚಿತ್ರದುರ್ಗಕ್ಕೆ ಬರುವ ಬಿಜೆಪಿ.ಜನಾಕ್ರೋಶ ಯಾತ್ರೆಯಲ್ಲಿ ಸಂವಿಧಾನಶಿಲ್ಪಿ

ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರದ ಮೆರವಣಿಗೆ ನಡೆಸಿ ಜನರನ್ನು ಜಾಗೃತಿಗೊಳಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಿ ಗಣತಿ ಬೋಗಸ್ ಗಣತಿ.

ವರದಿಯನ್ನು ಕಳೆದಿದೆ. ಕೇಂದ್ರ ಜಾತಿ ಜನಗಣತಿ ವೈಜ್ಞಾನಿಕವಾಗಿದೆ. ಮಂಗಳೂರಿನಲ್ಲಿ ಸುಹಾಸ್‌ಶೆಟ್ಟಿ ಕೊಲೆಯಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ಬೆನ್ನ ಹಿಂದೆಯೆ ಇಬ್ಬರು ನಾಯಕರಿಗೆ ಕೊಲೆ ಬೆದರಿಕೆಯಿದೆ. ಕೊಲೆ ಮಾಡಿದವರ ಪರ ಅನುಕಂಪದ ರೀತಿಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಮಾತನಾಡುತ್ತಿರುವುದು ಖಂಡನೀಯ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರವರು ಪೊಲೀಸರ ಮನಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಗೂಂಡಾಗಳ ವಿರುದ್ದ ಮೃದು ನಿಲುವು ತಾಳುತ್ತಿರುವುದರಿಂದ ರಾಜ್ಯದಲ್ಲಿ ಕೊಲೆಗಳು ಜಾಸ್ತಿಯಾಗುತ್ತಿವೆ. ಕಾಂತರಾಜ್ ವರದಿ ಕಳೆದಿಲ್ಲ. ಸರ್ಕಾರವೆ ಕದ್ದಿದೆ. ಮುಖ್ಯಮಂತ್ರಿ ಜಿಲ್ಲೆ ಜಿಲ್ಲೆಗೆ ಹೋಗಿ ಮೋದಿ ವಿರುದ್ದ ಅಪ ಪ್ರಚಾರದಲ್ಲಿ ತೊಡಗಿರುವುದನ್ನು ನಾವುಗಳು ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಮುಖಂಡ ಬಿ.ಸಿ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್‌ಸಿದ್ದಾಪುರ, ಸಂಪತ್‌ಕುಮಾರ್, ರಾಂದಾಸ್, ಜಯಪಾಲಯ್ಯ, ವಕ್ತಾರ ನಾಗರಾಜ್‌ ಬೇದ್ರೆ, ಯುವ ಮುಖಂಡ ಡಾ.ಸಿದ್ದಾರ್ಥ, ನಗರ ಮಂಡಲ ಅಧ್ಯಕ್ಷ ಲೋಕೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ ಯಾದವ್, ಕಾರ್ಯದರ್ಶಿ ಮೋಹನ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಕೆ.ಟಿ.ಕುಮಾರಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
error: Content is protected !!
";