ಏ.20 ರಂದು ಕೂನಿಕೆರೆ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಏಳು ಕೋಟಿ ಅಳುವಿನವರ ಆಂಜನೇಯ ಸ್ವಾಮಿ
, ಕುನಕಲಗುಂಡಿ ಆಂಜನೇಯ ಸ್ವಾಮಿ, ಕಾಟಮಲಿಂಗೇಶ್ವರ ಸ್ವಾಮಿ, ಭೂತರಾಯಸ್ವಾಮಿ ಹಾಗೂ ಲಕ್ಷ್ಮೀ ದೇವರುಗಳ ಜಾತ್ರಾ ಮಹೋತ್ಸವ ಇದೇ 17 ರಿಂದ 22ರವರೆಗೆ ನಡೆಯಲಿದೆ.

ಏ. 17 ರಂದು ಸಂಜೆ 7ಕ್ಕೆ ಕಂಕಣೋತ್ಸವ, ರಕ್ಷೋಘ್ನ ಹೋಮ, ಏ.18ರಂದು ಬೆಳಿಗ್ಗೆ ೭ಕ್ಕೆ ಪಂಚಾಮೃತ ಅಭಿಷೇಕ, ಸಹಸ್ರನಾಮ ಪೂಜೆ, ಸಂಜೆ ೬.೩೦ಕ್ಕೆ ಧ್ವಜಾರೋಹಣ, ಪ್ರಕಾರೋತ್ಸವ, ಏ.19 ರಂದು ಬೆಳಿಗ್ಗೆ 10ಕ್ಕೆ ಪಂಚಾಮೃತ ಅಭಿಷೇಕ, ಅಶ್ವವಾಹನ ಉತ್ಸವ, ಗಂಗಾಪೂಜೆ, ಜಲಧಿ ಉತ್ಸವ, ಮುಳ್ಳು ಪಲ್ಲಕ್ಕಿ ಉತ್ಸವ ಮತ್ತು ಸಂಜೆ ೬.೩೦ಕ್ಕೆ ಪ್ರಕಾರೋತ್ಸವ ಚಿಕ್ಕಮಕ್ಕಳಿಂದ ಭಜನೆ ಕಾರ್ಯಕ್ರಮ, ಮೆರವಣಿಗೆ ನಡೆಯಲಿದೆ.

ಏ.20 ರಂದು ಭಾನುವಾರ ಬೆಳಿಗ್ಗೆ ೬.೩೦ಕ್ಕೆ ಪುಷ್ಟಾಲಂಕಾರ ಸೇವೆ. ನಂತರ ಸಂಜೆ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ಹಾಗೂ  ನಂಜಾವಧೂತ ಸ್ವಾಮೀಜಿ ಅವರಿಂದ ಆಂಜನೇಯ ಸ್ವಾಮಿ ರಥಕ್ಕೆ ಕಳಸ ಸ್ಥಾಪನೆ. ಅಂದು ರಾತ್ರಿ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಜರುಗಲಿದೆ. ಬೆಳಗಿನ ಜಾವ ದಾಸಪ್ಪ ಅವರಿಂದ ಕಳ್ಳಿ ಕುಡಿ, ಗೊರಕಲ್ಲು ಪಾಯಸದ ಸೇವನೆ ಪವಾಡವಿದೆ.

ಏ.21 ರಂದು ಸೋಮವಾರ ಬೆಳಿಗ್ಗೆ ಕುಂಕುಮಾರ್ಚನೆ ಪೂಜೆ, ಪುಷ್ಪಯಾಗ ಸೇವೆ ಹಾಗೂ ಉಂಡೆ ಮಂಡೆ (ಮುಡಿ ತೆಗೆಯುವ) ಕಾರ್ಯಕ್ರಮ, ಏ.22 ರಂದು ಸಂಜೆ ೬ಕ್ಕೆ ವಸಂತೋತ್ಸವ ಓಕಳಿ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದ್ದು, ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.

ಪವಾಡ-ಕೂನಿಕೆರೆ ಗ್ರಾಮದ ಸಮೀಪದಲ್ಲಿರುವ ಕುನಕಲಗುಂಡಿಯಲ್ಲಿ ಆಂಜನೇಯಸ್ವಾಮಿ ದೇವರ ದಾಸಪ್ಪನವರು ಬ್ರಹ್ಮರಥೋತ್ಸವಕ್ಕೂ ಮುನ್ನ ರಾತ್ರಿ 12ರ ನಂತರ ಕುನಕಲ ಗುಂಡಿಯಲ್ಲಿ ಮುಳುಗಿ ಗುಂಡಿಯ ತಳದಲ್ಲಿರುವ ಬೆಂಚೆಕಲ್ಲುಗಳನ್ನು ತಂದು, ಆ ಕಲ್ಲಿನ ಜೊತೆಯಲ್ಲಿ ಕಳ್ಳಿಯ ಹಾಲನ್ನು ಸೇರಿಸಿ ಭಕ್ತರ ಸಮ್ಮುಖದಲ್ಲಿ ಕಳ್ಳಿಕುಡಿ, ಗೊರಕಲ್ಲು ಪಾಯಸ ಮಾಡಲಾಗುತ್ತದೆ.

ಬ್ರಹ್ಮ ರಥೋತ್ಸವಕ್ಕೂ ಮುನ್ನ ದಾಸಪ್ಪ ಗೊರಕಲ್ಲು ಪಾಯಸ ತಿಂದು ನಂತರ ರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಆ ಪಾಯಸವನ್ನು ನೀಡಲಾಗುತ್ತದೆ. ಆ ಪಾಯಸದಲ್ಲಿ ಯಾವುದೇ ರೀತಿಯ ಕಲ್ಲಾಗಲಿ, ಕಳ್ಳಿಕುಡಿಯಾಗಲಿ ಇರದೆ ಮಾಮೂಲು ಮನೆಯಲ್ಲಿ ಮಾಡುವ ಪಾಯಸದಂತಿರುತ್ತದೆ. ಈ ಪಾಯಸವನ್ನು ಸೇವನೆ ಮಾಡಿ ನಂತರ ಭಕ್ತರು ಇಲ್ಲಿಂದ ತೆರಳುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅದರಲ್ಲೂ ಹಳೇ ಮೈಸೂರು ಭಾಗದಿಂದ ಅತಿ ಹೆಚ್ಚು ಭಕ್ತರು ಆಗಮಿಸಲಿದ್ದಾರೆ.

ಹರಕೆ ಹೊತ್ತವರು, ಮಕ್ಕಳಾಗದವರು ಪ್ರತಿ ಶನಿವಾರ ರಾತ್ರಿ ೧೨ರ ನಂತರ ಈ ಕುನಕಲ ಗುಂಡಿಯಲ್ಲಿ ಗಂಗಾಪೂಜೆ ಮಾಡುವ ಪದ್ಧತಿಯು ಇದೆ.

 

Share This Article
error: Content is protected !!
";