ಸಿಎಂ ಕುರ್ಚಿಯ ಮೇಲೆ ಕೂಡಬಲ್ಲೆನೇ ಒಂದು ದಿನ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ದೇಶಿಸಿ ಮಾತನಾಡಿ ಕಾಣುವ ಕುರ್ಚಿಗೆ ಹಂಬಲಿಸಿದೇ ಮನ, ಕೂಡಬಲ್ಲೆನೇ ಒಂದು ದಿನ ಎಂದು ವಿಡಂಬನಾತ್ಮಕವಾಗಿ ಕಾಳೆದರು. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಮೇಲಿನ ಚರ್ಚೆ ವೇಳೆ ಈ ಸ್ವಾರಸ್ಯಕರ ಪ್ರಸಂಗ ನಡೆಯಿತು.

ಬಿಜೆಪಿ ಸದಸ್ಯ ಅರವಿಂದ್ ಬೆಲ್ಲದ್ ಮಾತನಾಡಿ, ಮೇಕೆದಾಟು ಪಿತಾಮಹ ಡಿ.ಕೆ.ಶಿವಕುಮಾರ್, ಮೇಕೆದಾಟುವಿನ ಯೋಜನೆ ಈಗಾಗಲೇ ಶುರು ಮಾಡಬಹುದು. ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್​​ ತಿರಸ್ಕಾರ ಮಾಡಿದೆಎಂದರು.ಬೆಲ್ಲದ್ ಮಾತಿಗೆ ಮಧ್ಯ ಪ್ರವೇಶ ಮಾಡಿದ ಡಿಸಿಎಂ ಡಿಕೆಶಿ, ಕೋರ್ಟ್ ನಮ್ಮದೇನು ಇಲ್ಲ ಸರ್ಕಾರ ತೀರ್ಮಾನ ಮಾಡಬೇಕು ಎಂದಿದೆ. ನಾನು ಹೊಸದಾಗಿ ಡಿಡಬ್ಲ್ಯೂಸಿಗೆ ಅರ್ಜಿ ಹಾಕುತ್ತೇನೆ.

- Advertisement - 

ಪರಿಷ್ಕೃತ ಡಿಪಿಆರ್ ಕೂಡ ರೆಡಿ ಮಾಡಿ ಕೊಡುತ್ತೇವೆ. ನಿಮ್ಮ ಎಲ್ಲರಿಗೂ ನಾನು ಕೈ ಮುಗಿದು ಕೇಳುತ್ತೇನೆ. ಆದಷ್ಟು ಬೇಗ ನಿಮ್ಮ ಎಲ್ಲರನ್ನು ಕರೆದುಕೊಂಡು ಹೋಗುವ ಸಂಕಲ್ಪವನ್ನು ತಾಯಿ ಕಾವೇರಿ ಕೊಟ್ಟಿದ್ದಾಳೆ. ನೀವೆಲ್ಲರೂ ಸಹಕಾರ ಕೊಡಬೇಕು, ಆದಷ್ಟು ಬೇಗ ಭೂಮಿ ಪೂಜೆ ಮಾಡೋಣಎಂದು ಕೈ ಮುಗಿದು ಮನವಿ ಮಾಡಿದರು.

ಈ ವೇಳೆ, ಎದ್ದುನಿಂತ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಇಷ್ಟು ನಯ, ವಿನಯ ಎಲ್ಲಿಂದ ಬಂತು ಸರ್ ನಿಮಗೆ. ಇದೇ ಡಿ.ಕೆ.ಶಿವಕುಮಾರಾ? ಹೊಸ ಶಿವಕುಮಾರಾ?. ಡಿ.ಕೆ.ಶಿವಕುಮಾರ್ ಎಂಬುದಕ್ಕೆ ಒಂದು ಕಲ್ಪನೆ ಇದೆ. ದಿಢೀರ್ ಆಗಿ ಇಷ್ಟು ನಯ, ವಿನಯ ಹೇಗೆ ಬಂತು? ಸಿ.ಅಶ್ವಥ್ ಅವರದ್ದು ಒಂದು ಹಾಡಿದೆ. ಕಾಣದ ಕಡಲಿಗೆ ಹಂಬಲಿಸುತ್ತಿದೇ ಮನ. ಕಾಣಬಲ್ಲೆನೆ ಒಂದು ದಿನ ಅಂತ. ಅದರಂತೆ, ಡಿ.ಕೆ.ಶಿವಕುಮಾರ್ ಅವರು, ಈಗ ಕಾಣುವ ಕುರ್ಚಿಗೆ ಹಂಬಲಿಸಿದೇ ಮನ, ಕೂಡಬಲ್ಲೆನೇ ಒಂದು ದಿನ ಎಂದು ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.‌

- Advertisement - 

ಹೀಗಾಗಿ ನಯ, ವಿನಯ ಶುರುವಾಯ್ತೊ? ನಿಜವಾಗಿ ವಿಪಕ್ಷದ ಬಗ್ಗೆ ನಯ, ವಿನಯ ಶುರುವಾಯ್ತೋ? ನಿಮ್ಮ ನಾಯಕತ್ವವನ್ನು ನಾವು ಒಪ್ಪುತ್ತೇವೆ. ಆದರೆ ನೀವು ಈ ರೀತಿ ನಯ, ವಿನಯ ತೋರಿಸಿದರೆ ಹೇಗೆ? ಎಂದು ಡಿಕೆಶಿ ಸಿಎಂ ಕುರ್ಚಿ ಕನಸು ಪ್ರಸ್ತಾಪಿಸಿ ಡಿಕೆಶಿ ಅವರ ಕಾಲೆಳೆದರು.

ಆಗ ಡಿ.ಕೆ.ಶಿವಕುಮಾರ್ ಅವರು, ಸುನೀಲ್ ಕುಮಾರ್ ಮಾತಿಗೆ ಏನು ಮಾತನಾಡದೇ ನಗುತ್ತಾ ಸುಮ್ಮನೆ ಕೂತಿದ್ದರು.‌ನಾಯಕತ್ವದ ಗೊಂದಲದ ಮಧ್ಯೆ ಸದನದಲ್ಲಿ ಸುನೀಲ್ ಕುಮಾರ್ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ದೇಶಿಸಿ ವಿಡಂಬನಾತ್ಮಕವಾಗಿ ಮಾತನಾಡಿರುವುದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು.

 

 

Share This Article
error: Content is protected !!
";