ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ದರಿದ್ರ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸಿಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಇವರಿಬ್ಬರ ನಡುವೆ ಆತಂತ್ರವಾಗಿರುವ ಮಂತ್ರಿಗಳು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಡಿನ್ನರ್ ಮೀಟಿಂಗ್, ಸೀಕ್ರೆಟ್ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವೆಲ್ಲದರ ನಡುವೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ರೈತರ ಕಷ್ಟ ಕೇಳಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಅವರು ದೂರಿದ್ದಾರೆ.
ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗದ ಕಾರಣ ರೈತರು ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಭತ್ತದ ದಲ್ಲಾಳಿಗಳಿಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕ್ವಿಂಟಾಲ್ ಭತ್ತಕ್ಕೆ 3,000 ಬೆಂಬಲ ಬೆಲೆ ನಿಗದಿಯಾಗಿದ್ದರೂ ಸರ್ಕಾರ ಭತ್ತ ಖರೀದಿ ಕೇಂದ್ರಗಳು ತೆರೆಯದ ಕಾರಣ ದಲ್ಲಾಳಿಗಳಿಗೆ 1,800-2,000 ರೂಪಾಯಿಗೆ ಮಾರಿ ನಷ್ಟ ಅನುಭವಿಸುತ್ತಿದ್ದಾರೆ.
ಕೃಷಿ ಸಚಿವ ಚಲುವನಾರಾಯಣಸ್ವಾಮಿ ಅವರ ತವರು ಜಿಲ್ಲೆಯಲ್ಲೇ ಈ ಗತಿ ಆದರೆ ಇನ್ನು ಬೇರೆ ಜಿಲ್ಲೆಗಳ ಗತಿ ಏನಾಗಿರಬಹುದು ಎನ್ನುವುದನ್ನ ಹೇಳಬೇಕಿಲ್ಲ ಎಂದು ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಸರಕಾರ ಯಾವಾಗ ತೊಗರಿ ಖರೀದಿ ಕೇಂದ್ರ ತೆರೆಯಲಿದೆ ಎಂದು ರೈತರು ಕಾತರದಿಂದ ಎದುರು ನೋಡುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ತೇವಾಂಶ ಕಡಿಮೆಯಿಂದ 1.82 ಲಕ್ಷ ಹೆಕ್ಟೇರ್‌ತೊಗರಿ ಬೆಳೆ ಹಾನಿಯಾಗಿದೆ ಎಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಆದರೆ, ಇದುವರೆಗೂ ರಾಜ್ಯ ಸರಕಾರ ಪರಿಹಾರದ ಮಾತೇ ಆಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಚಕಾರ ಎತ್ತುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ರೈತ ವಿರೋಧಿ ಸಿಎಂ ಸಿದ್ದರಾಮಯ್ಯ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮ್ಮದಿಯಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ.