ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒನ್ ಮಿನಿಟ್ ಉಮಾಜಯಕುಮಾರ್ ರವರಿಗೆ ಮುಡಿಗೇರಿದ ಪರಿಮಳ ಪ್ರಶಸ್ತಿ ಕರ್ನಾಟಕಕ್ಕೆ ಮನೆಮಾತಾಗಿರುವ ಖ್ಯಾತ ಅಲಂಕಾರ ತಜ್ಞೆ ಒನ್ ಮಿನಿಟ್ ಉಮಾ ಜಯಕುಮಾರ್ ರವರು ತಮ್ಮ ಅನನ್ಯ ಸಾಧನೆಗಳ ಮೂಲಕ ಮತ್ತೊಂದು ಮಹತ್ವದ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.
25ನೇ ಫೆಬ್ರವರಿ 2026ರಂದು ಮಂತ್ರಾಲಯದಲ್ಲಿ ಪ್ರದಾನಗೊಳ್ಳುವ ಅತಿಶ್ರೇಷ್ಠ ಪರಿಮಳ ಪ್ರಶಸ್ತಿ ಅವರಿಗೆ ಲಭಿಸಿದ್ದು, ಇದು ಅವರ ಸಾಧನಾ ಪಥಕ್ಕೆ ಮತ್ತೊಂದು ಗೌರವದ ಗರಿಯಾಗಿದೆ.
ಸೌಂದರ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಉಮಾ ಜಯಕುಮಾರ್ ರವರು ಇದುವರೆಗೆ 14 ಬಾರಿ ವಿಶ್ವದಾಖಲೆ ನಿರ್ಮಿಸಿ, ನೂರಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರ ಸಾಧನೆಗೆ ಸಾಕ್ಷಿಯಾಗಿವೆ.
ಕೇವಲ 30 ಸೆಕೆಂಡುಗಳಲ್ಲಿ ಮಹಿಳೆಗೆ ಅಲಂಕಾರ, ಕೇಶವಿನ್ಯಾಸ ಮತ್ತು ವಸ್ತ್ರವಿನ್ಯಾಸ ಮಾಡುವ ಅಪರೂಪದ ಕೌಶಲ್ಯ ಇವರದಾಗಿದ್ದು, ಇದು ರಾಷ್ಟ್ರಮಟ್ಟದಲ್ಲಿಯೇ ವಿಶೇಷ ಗಮನ ಸೆಳೆದಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಕಾರ್ಯಾಗಾರಗಳನ್ನು ನಡೆಸಿ, ಸಾವಿರಾರು ಮಹಿಳೆಯರಿಗೆ ವೃತ್ತಿಪರ ಮಾರ್ಗದರ್ಶನ ನೀಡಿರುವ ಹೆಗ್ಗಳಿಕೆ ಇವರದು.
ಅನೇಕ ವರ್ಷಗಳಿಂದ ಮಾಧ್ಯಮಗಳ ಮೂಲಕ ಅಲಂಕಾರ ಹಾಗೂ ಕೇಶವಿನ್ಯಾಸ ಕ್ಷೇತ್ರದಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಉಪಯುಕ್ತ ಸಲಹೆಗಳು ಮತ್ತು ಟಿಪ್ಸ್ ನೀಡುವಲ್ಲಿ ಇವರದು ಎತ್ತಿದ ಕೈ. ವೃತ್ತಿಪರ ಸಾಧನೆಯ ಜೊತೆಗೆ ಸಮಾಜಸೇವೆಗೂ ಅವರು ಆದ್ಯತೆ ನೀಡಿದ್ದು, ತಮ್ಮ ಆದಾಯದ ಒಂದು ಭಾಗವನ್ನು ಬಡಬಗ್ಗರಿಗೆ, ದೇವಾಲಯಗಳಿಗೆ, ಮಂಗಳಮುಖಿಯರಿಗೆ ಹಾಗೂ ವಿಕಲಚೇತನರಿಗೆ ಸಹಾಯವಾಗಿ ನೀಡುತ್ತಾ ಬಂದಿದ್ದಾರೆ.
ಇಂತಹ ಬಹುಮುಖ ಸಾಧನೆ, ಸಮಾಜಪರ ಕಾಳಜಿ ಮತ್ತು ಸೇವಾ ಮನೋಭಾವದ ಫಲವಾಗಿ ಲಭಿಸಿದ ಪರಿಮಳ ಪ್ರಶಸ್ತಿ, ಒನ್ ಮಿನಿಟ್ ಉಮಾಜಯಕುಮಾರ್ ರವರ ಜೀವನ ಸಾಧನೆಗೆ ಲಭಿಸಿದ ಮತ್ತೊಂದು ಮಹತ್ವದ ಗೌರವವಾಗಿದೆ.

