ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರಂಗನಾಥಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಸ್ವಸ್ಥ ನಾರಿ ಸ್ವಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮದ ಜೊತೆಗೆ ಪೌಷ್ಟಿಕ ಆಹಾರ ದಿನಾಚರಣೆ ಏರ್ಪಡಿಸಲಾಗಿತ್ತು.
ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ಮಾತನಾಡಿ ಆರೋಗ್ಯವಂತ ಮಹಿಳೆಯಿಂದ ಮಾತ್ರ ಸಶಕ್ತ ಭಾರತದ ನಿರ್ಮಾಣ ಸಾಧ್ಯ. ಆದ್ದರಿಂದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಅಡಿಯಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2 ರವರೆಗೆ ಸಮುದಾಯ ಆರೋಗ್ಯಕೇಂದ್ರಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
“ಸ್ವಸ್ಥ ನಾರಿ ಸಶಕ್ತ ಪರಿವಾರ್” ಎನ್ನುವುದು ಭಾರತ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಒಂದು ಅಭಿಯಾನವಾಗಿದ್ದು, ದೇಶದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಬಲಪಡಿಸುವ ಗುರಿ ಹೊಂದಿದೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆಗಳ ಉತ್ತಮ ಪ್ರವೇಶ, ಗುಣಮಟ್ಟದ ಆರೈಕೆ ಮತ್ತು ಜಾಗೃತಿ ಖಚಿತಪಡಿಸುವುದಾಗಿದೆ ಎಂದು ಸಣ್ಣ ರಂಗಮ್ಮ ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ, ಆರೋಗ್ಯ ಜಾಗೃತಿ ಮತ್ತು ಒಟ್ಟಾರೆ ಯೋಗ ಕ್ಷೇಮ ಉತ್ತೇಜಿಸುವುದಾಗಿದೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯವನ್ನು ಉತ್ತೇಜಿಸಬಹುದು ಮುಖ್ಯ ಉದ್ದೇಶವಾಗಿದೆ ಎಂದು ಸಣ್ಣ ರಂಗಮ್ಮ ಹೇಳಿದರು.
ಕುಟುಂಬದ ನಾರಿ ಆರೋಗ್ಯವಂತರಾಗಿದ್ದರೆ ಮನೆ ಸ್ವರ್ಗವಾಗಿರುತ್ತೆ. ಮನೆಯಲ್ಲಿ ಮಹಿಳೆಯರು ಅನಾರೋಗ್ಯದಿಂದ ಕೂಡಿದ್ದರೆ ಮನೆ ನರಕವಾಗುತ್ತದೆ. ಮನೆಯ ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ ಇದ್ದರೆ ಮನೆ ಮತ್ತು ನಮ್ಮ ಪರಿವಾರ ಸುಂದರವಾಗಿರುತ್ತದೆ.
ಅದಕ್ಕಾಗಿ ನಮಗೆ ಒಳ್ಳೆಯ ಆರೋಗ್ಯ ಇರಬೇಕಾದರೆ ಉತ್ತಮವಾದ ಆಹಾರಗಳನ್ನು ಸೇವಿಸಬೇಕು. ಹಣ್ಣು ಹಂಪಲು, ಹಸಿರು ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯ ಯಾವತ್ತೂ ನಶಿಸುವುದಿಲ್ಲ. ಗರ್ಭಿಣಿ ಬಾಣಂತಿಯವರು ಯಾವಾಗಲೂ ಆರೋಗ್ಯವಂತರಾಗಿದ್ದರೆ ಉತ್ತಮವಾದ ಮಗು ಪಡೆಯಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಸಿಎಚ್ಓ ಅವರು ಅಸಾಂಕ್ರಾಮಿಕ ರೋಗಗಳ ಬಗ್ಗೆ ಸ್ತ್ರೀಯರಿಗೆ ಬರುವ ಗರ್ಭಕಂಠ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ತಿಪ್ಪಮ್ಮ ಮಾತನಾಡಿ ಗರ್ಭಿಣಿ ಮತ್ತು ಬಾಣಂತಿಯವರ ಕುರಿತು ಮಾತನಾಡಿದರು.
ಎಚ್ಐಓ ರಂಜಿತಾ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿಸಿದರು.

