ಸ್ವಾಮೀಜಿಗಳ ಸಮ್ಮುಖದಲ್ಲಿ ಹಾಸನಾಂಬೆ ದೇಗುಲದ ಬಾಗಿಲು ಓಪನ್

News Desk

ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನಾಂಬೆ ದೇಗುಲದ ಬಾಗಿಲನ್ನು ಗುರುವಾರ ಮಧ್ಯಾಹ್ನ 12.19ಕ್ಕೆ ಶಾಸ್ತ್ರೋಕ್ತವಾಗಿ ಹಾಸನಾಂಬೆ ಗರ್ಭಗುಡಿಯ ಬಾಗಿಲು ವಿವಿಧ ಮಠಗಳ ಸ್ವಾಮೀಜಿಗಳು ಸೇರಿದಂತೆ ಇತರೆ ಗಣ್ಯರ ಸಮ್ಮುಖದಲ್ಲಿ ತೆರೆಯಲಾಯಿತು. ವರ್ಷಕ್ಕೊಮ್ಮೆ ಭಕ್ತರಿಗಾಗಿ ಹಾಸನಾಂಬೆ ದೇವಿಯ ಬಾಗಿಲು ತೆರೆಯಲ್ಪಡುತ್ತದೆ. ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಜನರು ಆಗಮಿಸಿದ್ದಾರೆ.

ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳೊಂದಿಗೆ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.
2025ರ ಅಕ್ಟೋಬರ್
23ರವರೆಗೆ ಬಾಗಿಲು ತೆರೆದಿರುತ್ತದೆ. ಆದರೆ ಬಾಗಿಲು ತೆರೆದ ಮೊದಲ ದಿನ ಮತ್ತು ಕೊನೆ ದಿನ ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ. ಒಟ್ಟು 13 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದರು, ಈ ಬಾರಿ 25 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲಾಡಳಿತ ಭಕ್ತರಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ.

- Advertisement - 

ತಳವಾರ ವಂಶಸ್ಥ ನರಸಿಂಹರಾಜು ಬಾಳೆಕಂಬ ಕತ್ತರಿಸುತ್ತಿದ್ದಂತೆಯೇ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ 12.19 ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಯಿತು. ದೇವಿಯ ಪವಾಡವೆಂದು ನಂಬಲಾಗುವ ಗರ್ಭಗುಡಿಯೊಳಗಿನ ನಂದಾದೀಪ ಉರಿಯುತ್ತಲೇ ಇತ್ತು. ಗರ್ಭಗುಡಿ ತೆರೆದ ಬಳಿಕ ದೇವಿಯ ಆಲಯದ ಒಳಗಡೆ ಪೂಜೆ ಕಾರ್ಯ ಆರಂಭವಾಗಿದೆ.

ಇದಕ್ಕೂ ಮುನ್ನ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರ ತಂಡವು ಮಂಗಳ ವಾದ್ಯಗಳ ನಾದದ ನಡುವೆ ಪೂಜಾ ಸಾಮಗ್ರಿಗಳ ಜೊತೆ ದೇವಾಲಯಕ್ಕೆ ಆಗಮಿಸಿ, ಗರ್ಭಗುಡಿ ಬಾಗಿಲಿಗೆ ವಿಶೇಷ ಪೂಜೆ ನೆರವೇರಿಸಿದರು.

- Advertisement - 

ಹಾಸನಾಂಬೆ ದೇವಿಯ ಬಾಗಿಲು ತೆರೆಯುವ ವೇಳೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಹೆಚ್.ಪಿ.ಸ್ವರೂಪ್ ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ಅಕ್ಟೋಬರ್-10ರಿಂದ ಅಕ್ಟೋಬರ್ 23ರವರೆಗೂ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ. ಆದರೆ, ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ 13 ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಟಿಕೆಟ್ ಬುಕಿಂಗ್ ಇತ್ಯಾದಿ ಸೇವೆಗಳನ್ನು ವಾಟ್ಸ್​ಆ್ಯಪ್​ ಮೂಲಕವೇ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅ.10 ರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ಯಾವುದೇ ಅನಾನುಕೂಲ ಆಗದಿರಲಿ ಎನ್ನುವ ಕಾರಣಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗುತ್ತಿದೆ. ಗಣ್ಯರಿಗಾಗಿ ವಿಶೇಷ ಸಾಲು, ವಿಶೇಷ ದರ್ಶನಕ್ಕೆ ಹಣ ಕೊಟ್ಟು ಬರುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲು, ಹೀಗೆ ಯಾವ ಭಕ್ತರಿಗೂ ಸಮಸ್ಯೆ ಆಗದಂತೆ ದರ್ಶನ ಮಾಡಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ 15 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಮಾಡಿದ್ದು, ಈ ಬಾರಿ ಮತ್ತಷ್ಟು ಭಕ್ತವೃಂದ ಆಗಮಿಸುವ ಸಾಧ್ಯತೆಯಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಸುತ್ತಲು ಬ್ಯಾರಿಕೇಡ್ ಅಳವಡಿಕೆ, ಟೆಂಟ್ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ದೇವಿಯ ಭಕ್ತರಿಗಾಗಿ ಆಡಳಿತ ಮಂಡಳಿ ವಾಟ್ಸ್​ಆ್ಯಪ್​ ಚಾಟ್ ಮೂಲಕ ಆನ್ಲೈನ್ ನೆರವು ನೀಡುವ ಯೋಜನೆ ಹಮ್ಮಿಕೊಂಡಿದೆ. ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿ ಆನ್ಲೈನ್ ಮೂಲಕ ಲಭ್ಯವಾಗಲಿದೆ. 6366105589 ನಂಬರ್​ಗೆ ಮೆಸೇಜ್ ಮಾಡಿದರೆ ನಿಮ್ಮ ದರ್ಶನ ಯಾವ ದಿನ, ಎಷ್ಟು ಗಂಟೆಗೆ ದರ್ಶನ ಎನ್ನುವ ಮಾಹಿತಿಯೂ ಅಂತರ್ಜಾಲದಲ್ಲಿ ತಿಳಿಯಲಿದೆ.

 

 

Share This Article
error: Content is protected !!
";