ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಪರೇಷನ್ ಸಿಂಧೂರವನ್ನು ‘ಚುಟ್ ಪುಟ್‘ ಯುದ್ದವೆಂದು ಲೇವಡಿ ಮಾಡಿದ್ದಾರೆ. ಕದನದ ಸಮಯದಲ್ಲಿ ಶಾಂತಿ ಮಂತ್ರ ಜಪಿಸಿದ್ದ ಕಾಂಗ್ರೆಸ್, ಕದನದ ತಾತ್ಕಾಲಿಕ ವಿರಾಮದ ಬಳಿಕ, ಸೈನಿಕರ ಕಾರ್ಯಾಚರಣೆಗೆ ಸಾಕ್ಷಿ ಕೇಳಿತ್ತು.
ಇದೀಗ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಚುಟ್ ಪುಟ್ ಯುದ್ಧವೆಂದು ಅಪಹಾಸ್ಯ ಮಾಡಿದೆ. ಇಷ್ಟೇ ಅಲ್ಲದೇ ಪಾಕಿಸ್ಥಾನವನ್ನು “ನಮ್ಮ ಪಾಕಿಸ್ಥಾನ” ಎಂದು ಸಂಬೋಧಿಸಿ ಪಾಕ್ ಮೇಲಿನ ತಮ್ಮ ವ್ಯಾಮೋಹವನ್ನು ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
AICC ಅಧ್ಯಕ್ಷರಾದ ಖರ್ಗೆ ಸಾಹೇಬ್ರು ಚುಟ್ ಪುಟ್ ಯುದ್ಧ ಅಂದ್ರೆ ಏನು ಅಂತ ಸ್ಪಷ್ಟಪಡಿಸಬೇಕು. ಮುಂಬೈ ದಾಳಿ ನಡೆದಾಗ ಪ್ರತೀಕಾರಕ್ಕೆ ದೇಶದ ಸೇನೆ ಸಿದ್ಧವಾಗಿದ್ದರೂ ಕೈ ಕಟ್ಟಿ ಕುಳಿತ ಭಾರತೀಯ ಕಾಂಗ್ರೆಸ್ ಇಂದು ಸೈನಿಕರ ಕಾರ್ಯಾಚರಣೆಯನ್ನು ಲೇವಡಿ ಮಾಡುವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಬಿಜೆಪಿ ಟೀಕಿಸಿದೆ.
ಇಲ್ಲಿಯ ತನಕ ದೇಶದಲ್ಲಿ ಮುಸ್ಲಿಮ್ ಓಲೈಕೆ ರಾಜಕಾರಣ ಮಾಡುತ್ತಾ ಬಂದಿದ್ದ ಕಾಂಗ್ರೆಸ್ ಪಕ್ಷ, ಈಗ ಪಾಕಿಸ್ತಾನದ ಪರ ಒಲೈಕೆಗೆ ಮುಂದಾಗಿರುವುದು ದುರಂತ! ಎಂದು ಬಿಜೆಪಿ ಹರಿಹಾಯ್ದಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಮೇರಿಕಾ ಬಳಿ ದುಂಬಾಲು ಬಿದ್ದಿದ್ದ ಪಾಕಿಸ್ತಾನ, ಬಳಿಕ ಭಾರತದೊಂದಿಗೆ ಕದನ ವಿರಾಮಕ್ಕೆ ಮಾತುಕತೆ ನಡೆಸಿತ್ತು. ಇದರ ಬೆನ್ನಲ್ಲೇ ತಾನೇ ಯುದ್ಧ ನಿಲ್ಲಿಸಿದ್ದು ಎಂದು ಟ್ರಂಪ್‌ಕೊಚ್ಚಿಕೊಂಡರೂ ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲಿಸಿದ್ದು ನಾನಲ್ಲ ಎಂದು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡರು.
ಆದರೆ ಅಮೇರಿಕಾ ಅಧ್ಯಕ್ಷರ ಆರಂಭದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕರು ಇಂದಿಗೂ ಭಾರತವನ್ನು ಕೀಳಾಗಿ ಕಾಣುತ್ತಿದ್ದಾರೆ. ಅಮೇರಿಕಾದ ಮಾತಿಗೆ ಭಾರತ ತಲೆಬಾಗಿದೆ ಎಂದು ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ಕಾಂಗ್ರೆಸ್‌ನಾಯಕರು ಭಾರತದ ಅಧಿಕೃತ ಹೇಳಿಕೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಹರಿಹಾಯ್ದಿದೆ.
ವಿದೇಶಕ್ಕೆ ತೆರಳುವ ನಿಯೋಗಗಳಿಗೆ ವಿದೇಶಾಂಗ ಕಾರ್ಯದರ್ಶಿಗಳು, ಕದನ ವಿರಾಮದ ಮಾತುಕತೆ ಬಂದಿದ್ದು ಪಾಕಿಸ್ತಾನದಿಂದಲೇ ಹೊರತು ಅಮೇರಿಕಾದಿಂದಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ಪಕ್ಷ ಪಾಕಿಸ್ತಾನ, ಅಮೇರಿಕಾ ಪರವಾಗಿ ವಾದಿಸುವುದನ್ನು ಇನ್ನಾದರು ಬಿಡುವುದೇ ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.