ವಿರೋಧಿಗಳು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ-ಮೀಸೆ ಮಹಾಲಿಂಗಪ್ಪ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಾರ್ವಜನಿಕವಾಗಿ ನನ್ನ ಹೆಸರಿಗೆ ಕೆಲವರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆಂದು ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಮೀಸೆ ಸಿ.ಮಹಲಿಂಗಪ್ಪ ತಮ್ಮ ವಿರುದ್ದ ಅಪ ಪ್ರಚಾರದಲ್ಲಿ ತೊಡಗಿರುವವರಿಗೆ ತಿರುಗೇಟು ನೀಡಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಕೆಲವು ಸದಸ್ಯರು ಹಾಗೂ ಸಂಘಕ್ಕೆ ಸಂಬಂಧವೇ ಇಲ್ಲದ ಕೆಲವರು  ತೇಜೋವಧೆಗಾಗಿ ನನ್ನ ಬಗ್ಗೆ ಇಲ್ಲ ಸಲ್ಲದ ಆಪಾದನೆಗಳನ್ನು ಹೊರಿಸುತ್ತಿದ್ದಾರೆ. ಇದಕ್ಕೆ ಯಾರು ಕಿವಿಗೊಡಬಾರದೆಂದು ಸಿ.ಮಹಲಿಂಗಪ್ಪ ಮನವಿ ಮಾಡಿದರು.

ಕೇಂದ್ರ ಮಂತ್ರಿಯಾಗಿದ್ದ ನಾರಾಯಣಸ್ವಾಮಿರವರು ಐವತ್ತು ಲಕ್ಷ ರೂ. ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಇಪ್ಪತ್ತು ಲಕ್ಷ ರೂ. ಸಂಸದ ಕೆ.ಎಸ್.ನವೀನ್ ಹತ್ತು ಲಕ್ಷ ರೂ.ಗಳನ್ನು ಸಂಘದ ಕಟ್ಟಡಕ್ಕೆ ಮಂಜೂರು ಮಾಡಿದ್ದಾರೆ. ನಿರ್ಮಿತಿ ಕೇಂದ್ರದವರು ಕಟ್ಟಡ ಕಟ್ಟಿಸುತ್ತಿರುವುದರಿಂದ ಅನುದಾನ ನೇರವಾಗಿ ಸಂಘಕ್ಕೆ ಬರುವುದಿಲ್ಲ. ವಾಸ್ತವ ಅರಿಯದವರು ಐದರಿಂದ ಹತ್ತು ಕೋಟಿ ರೂ.ದುರುಪಯೋಗವಾಗಿದೆಯೆಂದು ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿರುವುದು ಸತ್ಯಕ್ಕೆ ದೂರವಾದುದು. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸರ್ವ ಸದಸ್ಯರ ಸಭೆ ಕರೆಯುತ್ತೇನೆ. ತಾಕತ್ತಿದ್ದರೆ ಅಲ್ಲಿ ಬಂದು ಹಣ ದುರಪಯೋಗವಾಗಿರುವುದನ್ನು ಸಾಬೀತುಪಡಿಸಲಿ ಎಂದು ಸಿ.ಮಹಲಿಂಗಪ್ಪ ಸವಾಲು ಹಾಕಿದರು.

ಜಿಲ್ಲಾ ಯಾದವ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆನಂದ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್‌ ಯಾದವ್, ಖಜಾಂಚಿ ಎಸ್.ಟಿ.ಪಲ್ಗುಣೇಶ್ವರ ನಿರ್ದೇಶಕರುಗಳಾದ ಗೋವಿಂದಪ್ಪ, ರಂಗಸ್ವಾಮಿ, ಪ್ರಕಾಶ್, ಚಂದ್ರಣ್ಣ, ಟಿ.ತಿಮ್ಮಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
error: Content is protected !!
";