ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಮುಂಬರುವ ಮೇ 1ರಿಂದಲೇ ಪ್ರವೇಶ ದೊರೆಯಲಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದಲ್ಲಿನ ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರಿಂದಾಗಿ ಕಳೆದ ನಾಲ್ಕು ತಿಂಗಳಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಪ್ರಸ್ತುತ ಕಾಮಗಾರಿ ಮುಕ್ತಾಯವಾಗಿದ್ದು ಈಗ ಸಾರ್ವಜನಿಕರ ಪ್ರವೇಶಕ್ಕಿದ್ದ ನಿರ್ಬಂಧ ತೆಗೆದು ಹಾಕಲಾಗಿದ್ದು ಮೇ.1 ರಿಂದ ಮುಕ್ತವಾಗಿರಲಿದೆ.
ಜನವರಿ 1ರಿಂದ ಮಾರ್ಚ್ 30ರ ತನಕ ಜೋಗ ಜಲಪಾತದ ಬಳಿ ವಿವಿಧ ಕಾಮಗಾರಿಗಳ ನಡೆಯಬೇಕಿದ್ದ ಕಾರಣ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿತ್ತು.
ಜೋಗದಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಗೋಪುರ, ಪಾರ್ಕಿಂಗ್, ಪ್ರವೇಶ ದ್ವಾರ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೇ 1ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.