ಬಿಜೆಪಿ-ಜೆಡಿಎಸ್ ನಡೆ ಖಂಡಿಸಿ ಶೋಷಿತ ಸಮುದಾಯಗಳ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ವಿರುದ್ಧದ ಕ್ರಿಮಿನಲ್ ಪ್ರಕರಣ ತನಿಖೆಗೆ ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ಮಧ್ಯಾಹ್ನ
197 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿದೆ. 

  ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಆರ್‌ಪಿಸಿ 17′ಅಡಿ ಪ್ರಾಥಮಿಕ ತನಿಖೆಗೆ ಅನುಮತಿ ನೀಡಿರುವ ಹೈಕೋರ್ಟ್‌, ರಾಜ್ಯಪಾಲರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218ರಲ್ಲಿ ನೀಡಿದ್ದ ಪ್ರಾಸಿಕ್ಯೂಷನ್‌ಆದೇಶವನ್ನು ತಿರಸ್ಕರಿಸಿದೆ. ಈ ಮೂಲಕ ನೇರ ಪ್ರಾಸಿಕ್ಯೂಷನ್ ತೂಗುಗತ್ತಿಯಿಂದ ಸಿಎಂ ಸಿದ್ದರಾಮಯ್ಯ ಪಾರಾಗಿದ್ದಾರೆ. ಆದಾಗ್ಯೂ ಕಾನೂನಾತ್ಮಕವಾಗಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ. 

   ಇದರ ಬೆನ್ನಲ್ಲೇ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಕ್ಷಗಳು ಸಿಎಂ ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. 

   ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡೆಯನ್ನು ಖಂಡಿಸಿ ಇಂದು, ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ದೊಡ್ಡಬಳ್ಳಾಪುರ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು. 

   ಈ ವೇಳೆ ಮಾತನಾಡಿದ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ರಾಮಣ್ಣ ಅವರು, ಬಿಜೆಪಿ- ಜೆಡಿಎಸ್‌ಪಕ್ಷದವರು ಕುತಂತ್ರದಿಂದ ಅಹಿಂದ ನಾಯಕನನ್ನು ಕಾನೂನಿನ ಕುಣಿಕೆಗೆ ಸಿಲುಕಿಸಲು ರಾಜಭವನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. 

   ಇವರ ಯಾವ ತಂತ್ರವೂ ನಡೆಯುವುದಿಲ್ಲ. ಅಕ್ರಮ ಡಿನೋಟಿಫೀಕೇಷನ್ ಮಾಡಿ ಜಾಮೀನಿನ ಮೇಲೆ ಹೊರಗಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.

   ಅಹಿಂದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ಬಡ ಜನರ ಪರವಾಗಿ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದ್ದು, ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಬಲ್ಲ ನಾಯಕರಾಗಿ ಸಿದ್ದರಾಮಯ್ಯ ಜನಪ್ರಿಯರಾಗಿದ್ದಾರೆ. ಇದನ್ನು ಹೇಗಾದರೂ ಮಾಡಿ ತಡೆಯಲು ಕಮಲ-ದಳ ಮೈತ್ರಿ ಪಕ್ಷದರು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಿಡಿ ಕಾರಿದರು. 

   ಸಿಎಂ ಸಿದ್ದರಾಮಯ್ಯ ಅವರು ಬಡವರಿಗಾಗಿ‌ನೀಡುತ್ತಿರುವ ಐದು ಗ್ಯಾರಂಟಿಗಳನ್ನು  ತಡೆಯಲು ಬಿಜೆಪಿ-ಜೆಡಿಎಸ್ ಸೇರಿ ಈ ಕುತಂತ್ರ ಮಾಡುತ್ತಿದ್ದಾರೆ. ಇದು ಹೆಣ್ಣುಮಕ್ಕಳಿಗೆ ಅರಿವಾದರೆ ಅವರೇ ತಕ್ಕ ಪಾಠ ಕಲಿಸುತ್ತಾರೆ ಎಂದರು. 

   ಒಕ್ಕೂಟದ ಮುಖಂಡ ಕಂಟನಕುಂಟೆ ಕೃಷ್ಣಮೂರ್ತಿ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಭೂಮಿಗೆ ಪರಿಹಾರವಾಗಿ ಬದಲಿ ನಿವೇಶನ ಪಡೆಯುವುದರಲ್ಲಿ ತಪ್ಪೇನಿದೆ..? ನಿವೇಶನ ಹಂಚಿಕೆಯಾಗಿರುವುದು ಬಿಜೆಪಿ ಅಧಿಕಾರದ ಅವದಿಯಲ್ಲಿ ಹೀಗಿರುವಾಗ ಸಿದ್ದರಾಮಯ್ಯ ಅವರು ಪ್ರಭಾವ ಬೀರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

   ದೂರುದಾರರಾಗಲಿ ಅಥವಾ ವಿರೋಧ ಪಕ್ಷಗಳಾಗಲಿ ಮುಡಾ ನಿವೇಶನ ಹಂಚಿಕೆ ಮಾಡಲು ಸಿದ್ದರಾಮಯ್ಯ ಶಿಫಾರಸು ಮಾಡಿರುವ ಯಾವುದೇ ದಾಖಲೆಗಳೂ ಇಲ್ಲ.

   ರಾಜ್ಯಪಾಲರು ಖಾಸಗಿ ದೂರನ್ನು ಮುಂದಿಟ್ಟುಕೊಂಡು ಅಭಿಯೋಜನೆಗೆ ಅವಕಾಶ ನೀಡಿರುವುದು ಕಾನೂನುಬಾಹಿರವಾಗಿದೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ಕಾರಣಕ್ಕೆ ಬಿಜೆಪಿಯಿಂದ ರಾಜಭವನವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿದ ಎಂದ ಅವರು ಸಿದ್ದರಾಮಯ್ಯ ಅವರು ನಿವೇಶನಕ್ಕಾಗಿ ಶಿಫಾರಸು ಮಾಡಿರುವ ಯಾವುದೇ ದಾಖಲೆಗಳು ಇದ್ದರೆ ಕೊಡಿ ಎಂದು ಸವಾಲು ಎಸೆದರು. 

   ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ, ಅವರ ಪತ್ನಿ ಪಾರ್ವತಿ ಅವರು ಕಳೆದುಕೊಂಡ ಭೂಮಿಗೆ ಬದಲಿ ನಿವೇಶನ ಹಂಚಿಕೆಯಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾವುದೇ ಸಂಸ್ಥೆಯಿಂದ ಯಾವುದೇ ವಿಚಾರಣೆಗಳೇ ನಡೆದಿಲ್ಲ‌. ಸುಳ್ಳು ಆರೋಪಗಳ ಮೂಲಕ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಂಚು ನಡೆಸುತ್ತಿದ್ದಾರೆ ಇದರಿಂದ ಭವಿಷ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಕ್ಕ ಪಾಠ ಕಲಿಯಲಿದೆ ಎಂದರು.

   ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಆಂಜನ ಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನ್ನಾಥ್ ಗ್ರಾಮಾಂತರ ಅಧ್ಯಕ್ಷ ಬೈರೇಗೌಡ. , ರೇವತಿ ಅನಂತರಾಮ್, ಮುನಿರಾಜು, ವಿನೋದ್ ಕುಮಾ‌ರ್, ನಗರಸಭೆ ಸದಸ್ಯರಾದ ಆನಂದ್‌, ಹೆಚ್.ಎಸ್. ಶಿವಶಂಕರ್, ಚಂದ್ರಮೋಹನ್‌, ಕಾಂತರಾಜ್, ಶಿವು, ಶ್ರೀನಗರ ಬಷೀರ್, ಕುರುಬರಹಳ್ಳಿ ಕೆಂಪಣ್ಣ, ಬಾಶೆಟ್ಟಿಹಳ್ಳಿ ರಾಜಣ್ಣ, ಜನಪರ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";