ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಮಂಗಳವಾರ 462 ಕ್ಯೂಸೆಕ್ ಇದ್ದು ಭರ್ತಿಗೆ ಕೇವಲ 1.50 ಬಾಕಿ ಇರುವಂತೆ ಭದ್ರಾ ಡ್ಯಾಂನಿಂದ 2025ರ ಜನವರಿ ಅಂತ್ಯದ ವರೆಗೆ ವಿವಿ ಸಾಗರಕ್ಕೆ ನೀರು ಹರಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಭದ್ರಾ ಜಲಾಶಯದಿಂದ ಭದ್ರಾ ಯೋಜನೆಗೆ ಹಂಚಿಕೆಯಾದ 12.50 ಟಿಎಂಸಿ ನೀರಿನ ಪೈಕಿ ತರೀಕೆರೆ ಏತ ನೀರಾವರಿ 1.47 ಟಿಎಂಸಿ ಹಾಗೂ ವಾಣಿ ವಿಲಾಸ ಸಾಗರಕ್ಕೆ 2 ಟಿಎಂಸಿಯಂತೆ ಒಟ್ಟು 3.47 ಟಿಎಂಸಿ ನೀರನ್ನು ಎತ್ತಲು ಅನುಮತಿ ನೀಡಲಾಗಿತ್ತು.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಮತ್ತು ತರೀಕೆರೆ ಏತ ನೀರಾವರಿ ಯೋಜನೆಗೆ ಸೌಲಭ್ಯ ಕಲ್ಪಿಸಲು ಉಳಿದ 9.03ಟಿಎಂಸಿ ನೀರಿನ ಮಿತಿಯಲ್ಲಿ ನಿತ್ಯ 700 ಕ್ಯೂಸೆಕ್ ನೀರನ್ನು ಜನವರಿ-2025ರವರೆಗೆ ಹರಿಸಲು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾಮಣಿ ಅವರು ದಿನಾಂಕ-26-11-2025 ರಂದು ಆದೇಶ ಮಾಡಿದ್ದಾರೆ.
ಅಭಿನಂದನೆ-“89 ವರ್ಷಗಳ ನಂತರ 2022ರಲ್ಲಿ ವಿವಿ ಸಾಗರ ಡ್ಯಾಂ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಜಲಾಶಯದ ನೀರನ್ನು ಸರಿಯಾಗಿ ವೈಜ್ಞಾನಿಕವಾಗಿ ನೀರು ಉಪಯೋಗಿಸದೇ ವೆಸ್ಟ್ ಮಾಡಿದರು. ಅಕ್ಟೋಬರ್ ಅಂತ್ಯಕ್ಕೆ ಭದ್ರಾ ನೀರು ನಿಲ್ಲಿಸಬೇಕಿತ್ತು. ಆದರೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ಕಾಳಜಿಯಿಂದ ಮತ್ತೆ ಭದ್ರಾದಿಂದ ನೀರು ಹರಿಸಲು ಮುಂದುವರಿಸುವಂತೆ ಆದೇಶ ಮಾಡಿಸಿರುವುದು ಸಂತಸ ತಂದಿದೆ.
ಜನವರಿವರೆಗೂ ಪ್ರತಿದಿನ 700 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಡಿಸೆಂಬರ್ ನಲ್ಲಿ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳಲಿದೆ. ರೈತರು ಸರಿಯಾಗಿ ನೀರು ಬಳಸಿಕೊಳ್ಳಬೇಕು.
ಇಂತಹ ಮಹತ್ಕಾರ್ಯ ಮಾಡಿರುವ ಸಚಿವ ಸುಧಾಕರ್ ಅವರಿಗೆ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್. ತಿಮ್ಮಯ್ಯ ಅವರು ರೈತರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.