ಚಂದ್ರವಳ್ಳಿ ನ್ಯೂಸ್, ಮೈಸೂರು:
ಡಿ.ಕೆ.ಶಿವಕುಮಾರ್ ಮೂಲ ಕಾಂಗ್ರೆಸ್ಸಿಗರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸೀಟು ಗೆಲ್ಲಲು ಡಿಕೆ ಶಿವಕುಮಾರ್ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಕಟ್ಟಿದವರು ಡಿಕೆ ಶಿವಕುಮಾರ್. ಅವರ ಜೊತೆಗೆ ಮೂಲ ಕಾಂಗ್ರೆಸ್ಸಿಗರು. ಎಲ್ಲಿಂದಲೋ ಬಂದ ಸಿದ್ದರಾಮಯ್ಯ ಕಾಂಗ್ರೆಸ್‌ಸೇರಿಕೊಂಡವರು. ನಿಜವಾಗಿ ಮುಖ್ಯಮಂತ್ರಿ ಸ್ಥಾನ ಡಿಕೆಶಿಗೆ ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಸಿಎಂ ಪಟ್ಟ ಯಾರ ಆಸ್ತಿಯೂ ಅಲ್ಲ ಎಂದು ಅವರು ತಿಳಿಸಿದರು.
ಸರ್ಕಾರ ಎಲ್ಲಿದೆ:
ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದರು. ಎರಡನೇ ಬಾರಿಯ ಸಿದ್ದರಾಮಯ್ಯನವರ ಆಡಳಿತ ನೋಡಿದರೆ, ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಅನ್ನಿಸುತ್ತದೆ. ಸದನದಲ್ಲಿ ಹನಿಟ್ರ್ಯಾಪ್‌ಬಗ್ಗೆ ಒಬ್ಬ ಮಂತ್ರಿ ಮಾತನಾಡುತ್ತಾರೆ ಎಂದರೆ ಸರ್ಕಾರ ಎಲ್ಲಿದೆ ಇದೆ ನೀವೇ ಊಹಿಸಿ ಎಂದು ವಿಶ್ವನಾಥ್ ಹೇಳಿದರು.
ಗ್ಯಾರಂಟಿಯಿಂದ ಸಾಲ: ರಾಜ್ಯದ ಆರ್ಥಿಕತೆ ಮೇಲೆ ಗ್ಯಾರಂಟಿ ಯೋಜನೆಗಳು ಅನಾವಶ್ಯಕವಾಗಿ ಕೆಟ್ಟ ಪರಿಣಾಮ ಬೀರುತ್ತಿವೆ. ಹಿಂದಿನ ಸರ್ಕಾರಗಳು ಫ್ರೀ ನೀಡಿವೆ. ಆದರೆ, ಸಬ್ಸಿಡಿಯಲ್ಲಿ ನೀಡಿವೆ. 76 ಸಾವಿರ ಕೋಟಿ ರೂ. ಹಣವನ್ನು ಉಚಿತ ಗ್ಯಾರಂಟಿಗಾಗಿ ಖರ್ಚು ಮಾಡಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಹಣದಲ್ಲಿ ನಾಲ್ಕು- ಐದು ನೀರಾವರಿ ಯೋಜನೆಗಳ ಸಮಸ್ಯೆ ಮುಗಿಯುತ್ತಿತ್ತು. ವಿವೇಚನೆಯಿಲ್ಲದೆ ಸರ್ಕಾರ ತೆರಿಗೆದಾರರ ಹಣವನ್ನು ದುಂದುವೆಚ್ಚ ಮಾಡುತ್ತಿದೆ. ಜನರ ಶ್ರಮದ ಹಣ ಸರಿಯಾಗಿ ಖರ್ಚು ಆಗುತ್ತಿಲ್ಲ. ವಿರೋಧ ಪಕ್ಷ ಬಿಜೆಪಿಯವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಟ್ಟಿನಲ್ಲಿ ರಾಜ್ಯದ ಜನ ಹಾಳಾಗುತ್ತಿದ್ದಾರೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.