ಚಂದ್ರವಳ್ಳಿ ನ್ಯೂಸ್, ತುಮಕೂರು:
ನಮ್ಮ ಹಬ್ಬ – ನಾಡ ಹಬ್ಬದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನವೆಂಬರ್ ತಿಂಗಳ ಮೊದಲನೇ ದಿನ(ನವೆಂಬರ್-1) ಕನ್ನಡ, ಕರ್ನಾಟಕದ ಜನರ ಮನಸ್ಸುಗಳನ್ನು ಒಂದೆ ಕಡೆ ಒಂದಾಗಿಸುವ ವಿಶಿಷ್ಟ ದಿನ.
ಇದೇ ದಿನ ೧೯೫೬ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯದಡಿ ಸೇರಿಸಿ “ಮೈಸೂರು ರಾಜ್ಯ”ವನ್ನು ರಚಿಸಲಾಯಿತು. ಬಳಿಕ ೧೯೭೩ರಲ್ಲಿ ಅದೇ ರಾಜ್ಯಕ್ಕೆ “ಕರ್ನಾಟಕ” ಎಂದು ಹೆಸರಿಟ್ಟರು. ಈ ದಿನದಿಂದ ಪ್ರತಿ ಕನ್ನಡಿಗನ ಹೃದಯದಲ್ಲಿ ಆಧುನಿಕ ಆತ್ಮಗೌರವ ಹುಟ್ಟಿತು.
ರಾಜ್ಯೋತ್ಸವದ ದಿನ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿ ಕೆಂಪು-ಹಳದಿ ಬಾವುಟಗಳು ಹಾರಾಡುತ್ತವೆ. ಕನ್ನಡದ ಗೀತೆಗಳು ಪ್ರತಿಯೊಂದು ಬೀದಿಯಲ್ಲಿ ಕೇಳಿಸುತ್ತವೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಶಾಲೆಗಳವರೆಗೆ ಎಲ್ಲೆಡೆ ಕುವೆಂಪು ಅವರು ಬರೆದಿರುವ “ಜಯ ಭಾರತ ಜನನಿಯ ತನುಜಾತೆ” ಎಂಬ ಧ್ವನಿ ಎಲ್ಲಡೆ ಕೇಳುತ್ತದೆ.
ಆದರೆ ಈ ಸಂಭ್ರಮದ ನಡುವೆಯೇ ಒಂದು ನಿಜವಾದ ಪ್ರಶ್ನೆ ಎದ್ದುಕೊಳ್ಳುತ್ತದೆ. ನಾವು ಕನ್ನಡದ ಗೌರವವನ್ನು ನಿಜವಾಗಿ ಉಳಿಸಿಕೊಂಡಿದ್ದೇವೆಯೇ? ನಗರಗಳ ಹೆಸರಿನಲ್ಲಿ, ಅಂಗಡಿಗಳ ಬೋರ್ಡುಗಳಲ್ಲಿ, ಶಿಕ್ಷಣದಲ್ಲಿ ಕನ್ನಡ ನಿಧಾನವಾಗಿ ಅಳಿದುಹೋಗುತ್ತಿರುವುದು ಬೇಸರದ ಸಂಗತಿ. ಕನ್ನಡ ಕೇವಲ ನವೆಂಬರ್ 1ನೇ ದಿನದ ಭಾಷೆಯಾಗದೆ, ದೈನಂದಿನ ಬದುಕಿನ ಭಾಷೆಯಾಗಿ ಉಳಿಯಬೇಕು.
ಕನ್ನಡ ರಾಜ್ಯೋತ್ಸವದ ಉದ್ದೇಶ ಕೇವಲ ಹಬ್ಬವಲ್ಲ; ಅದು ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಅವಕಾಶ. ಯುವ ಪೀಳಿಗೆ ಕನ್ನಡ ಮಾತನಾಡುವ, ಬರೆಯುವ, ಓದುವ ಮನಸನ್ನು ಹೊಂದಬೇಕಾಗಿದೆ. “ಕನ್ನಡ ನನ್ನ ನುಡಿ” ಎಂಬ ಭಾವನೆ ಪ್ರತಿಯೊಬ್ಬರ ಮನದಲ್ಲೂ ಬೆಳೆಬೇಕು.

ನಮ್ಮ ನಾಡು ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ. ಗೋಕಾಕ್, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಪುರಂದರದಾಸ, ಒನಕೆ ಓಬವ್ವ, ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ಅಬ್ಬಕ್ಕ ದೇವಿ, ಕೆಂಪೇಗೌಡ, ಶ್ರೀ ಶಿವಕುಮಾರ ಸ್ವಾಮೀಜಿ, ಬಸವಣ್ಣರಂತಹ ಮಹನೀಯರನ್ನು ಕಂಡತಂಹ ನಾಡು.
ಆ ಮಹಾನೀಯರ ಕನಸು ಒಂದೇ, ಕನ್ನಡ ನಾಡು ಅಭಿವೃದ್ಧಿ ಹೊಂದಲಿ, ಕನ್ನಡದ ಕೀರ್ತಿ ಎಲ್ಲೆಡೆ ಹರಡಲಿ. ಆ ಕನಸನ್ನು ಜೀವಂತವಾಗಿಡುವುದು ನಮ್ಮ ಕರ್ತವ್ಯ.
ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರದಿಂದ ಹಿಡಿದು ಸಾರ್ವಜನಿಕ ಸಂಸ್ಥೆಗಳವರೆಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಸಾಂಸ್ಕೃತಿಕ ಮೆರವಣಿಗೆಗಳು, ಕವಿ ಗೋಷ್ಠಿಗಳು, ಕನ್ನಡ ಪ್ರಶಸ್ತಿ ಪ್ರದಾನಗಳು, ಬಾವುಟಾರೋಹಣ ಕಾರ್ಯಕ್ರಮಗಳು. ಆದರೆ ನಿಜವಾದ ರಾಜ್ಯೋತ್ಸವವೆಂದರೆ ಕನ್ನಡ ಮನಸ್ಸಿನಲ್ಲಿ ಬಾಳುವುದು. ಈ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಒಂದು ಶಪಥ ಮಾಡಬೇಕು.
ನನ್ನ ತಾಯಿ ಕನ್ನಡಾಂಬೆ ಯಾಗಿರಲಿ, ನನ್ನ ಮಾತು ಕನ್ನಡದಲ್ಲಿರಲಿ, ನನ್ನ ಶಿಕ್ಷಣ ಕನ್ನಡದಲ್ಲಿರಲಿ, ನನ್ನ ಕೆಲಸ ಕನ್ನಡದ ಸೇವೆಗೆ ಇರಲಿ, ನನ್ನ ಹೆಮ್ಮೆ ಕನ್ನಡವಾಗಿರಲಿ.
ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್-೧ರ ಹಬ್ಬವಲ್ಲ, ಅದು ನಮ್ಮ ಗುರುತು, ನಮ್ಮ ಪ್ರೀತಿ, ನಮ್ಮ ನಂಬಿಕೆಯ ಮತ್ತೊಂದು ರೂಪ.
ಜಯ ಕರ್ನಾಟಕ! ಜಯ ಕನ್ನಡ!!.
ಲೇಖನ-ಹರಿಯಬ್ಬೆ ನಾಗಭೂಷಣ.ಡಿ.

