ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಶನಿವಾರದಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಲಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಈ ಸಮೀಕ್ಷೆಯಲ್ಲಿ ಗಣತಿದಾರರಿಗೆ ನಾನು ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸಿದ್ದೇನೆ. ನಾನು ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ವಾಸವಿದ್ದರೂ, ಇಲ್ಲಿ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ.
ಸಾರ್ವಜನಿಕರೆಲ್ಲರೂ ತಾಳ್ಮೆಯಿಂದ ನಿಮ್ಮ ಮಾಹಿತಿಯನ್ನು ಒದಗಿಸಿಕೊಟ್ಟರೆ ಮುಂದಿನ ಪೀಳಿಗೆಗೆ, ಸಮಾಜಕ್ಕೆ ಹಾಗೂ ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸಿ ಕೊಟ್ಟಂತೆ ಆಗುತ್ತದೆ ಎಂದು ಡಿಸಿಎಂ ಅವರು ತಿಳಿಸಿದರು.
ಸಮೀಕ್ಷೆ ವೇಳೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುತ್ತಾರೆ. ಆನ್ಲೈನ್ನಲ್ಲೂ ಮಾಹಿತಿ ಕೊಡಲು ಅವಕಾಶ ಮಾಡಿಕೊಡಲಾಗಿದೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ ತರಬೇತಿ ಪಡೆದ 17,500 ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದು, ಪ್ರತಿಯೊಬ್ಬರೂ ಸರಿಯಾದ ಮಾಹಿತಿ ನೀಡಬೇಕೆಂದು ಡಿಸಿಎಂ ಶಿವಕುಮಾರ್ ವಿನಂತಿ ಮಾಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಆರಂಭವಾಗಿದ್ದು, ಡಿಸಿಎಂ ಡಿ. ಕೆ. ಶಿವಕುಮಾರ್ ನಿವಾಸ ಸದಾಶಿವನಗರದಲ್ಲಿ ಸಮೀಕ್ಷಾದಾರರು ಸಮೀಕ್ಷೆ ನಡೆಸಿದರು.
ಸದಾಶಿವನಗರ ನಿವಾಸದಲ್ಲಿ ಸಮೀಕ್ಷೆ ಬಂದ ಸಿಬ್ಬಂದಿಗೆ ತಮ್ಮ ಮಾಹಿತಿ ನೀಡುವ ಮೂಲಕ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸಮೀಕ್ಷೆಯನ್ನು ಶನಿವಾರ ಉದ್ಘಾಟಿಸಿದರು.
ಡಿ. ಕೆ. ಶಿವಕುಮಾರ್ ಗಣತಿದಾರರ ಪ್ರಶ್ನೆಗೆ ಒಂದೊಂದಾಗಿ ಉತ್ತರಿಸಿದರು. ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ, ಉದ್ಯೋಗ ಕೃಷಿ ಎಂದು ಹಾಕಿ ಎಂದರು. ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ಮಾಹಿತಿ ನೀಡಿದರು.
ಜಾತಿ ಪ್ರಮಾಣ ಪತ್ರ ಶಾಲೆಯಲ್ಲಿ ಪಡೆದಿದ್ದೇನೆ. 31ರ ವಯಸ್ಸಿನಲ್ಲಿ ಮದುವೆ ಯಾಗಿದ್ದೇನೆ. ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಮೀಸಲಾತಿ ಸೌಲಭ್ಯವನ್ನು ಪಡೆದಿಲ್ಲ. ಕುಲ ಕಸುಬು ಕೃಷಿ ಸಾಗುವಳಿ, ಆದಾಯ ದೊಡ್ಡ ಸ್ಲಾಬ್ ಹಾಕು ಎಂದರು.
ಅಂಜೆ ವಿಳಾಸ ದೊಡ್ಡಹಾಲಹಳ್ಳಿ. ಕುಟುಂಬ ಹೊಂದಿರುವ ಆಸ್ತಿ, ಸಾಲ, ಹೈನುಗಾರಿಕೆ ಸೇರಿದಂತೆ ಇತರ ಮಾಹಿತಿ ನೀಡಿದರು.ಕುಟುಂಬದ ವಿವರ ತೆಗೆದುಕೊಳ್ಳಿ. ಇದು ಕಂಪ್ಲೀಟ್ ಮಾಡಿಲ್ಲ ಎಂದ ಡಿಕೆಶಿ, ಎರಡು ದಿನ ಲೇಟ್ ಆಗಲಿ, ನಿಧಾನವಾಗಿ ಸರಿಯಾಗಿ ಮಾಹಿತಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಇದೇ ವೇಳೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಡಿಕೆಶಿ, ದಿನಕ್ಕೆ ಎಷ್ಟು ಮಾಡ್ತೀರಾ ಸಮೀಕ್ಷೆ?. ನಮ್ಮ ಮನೆಯಲ್ಲೇ ಒಂದು ಗಂಟೆ ಆಯ್ತಲ್ಲ ಎಂದು ಕೇಳಿದರು.
ಆಗ ರಾಜೇಂದ್ರ ಜೋಳನ್ ಉತ್ತರಿಸುತ್ತಾ, ಸರ್, ನಮಗೆ ದಿನಕ್ಕೆ 20 ಮಾಡಲು ಹೇಳಿದ್ದಾರೆ ಎಂದರು. ಆಗ ಡಿಕೆಶಿ ಈ ಪ್ರಶ್ನಾವಳಿಯಲ್ಲಿ ಕಷ್ಟ ಸಾಧ್ಯ. ಕುರಿ-ಕೋಳಿ, ಟ್ರ್ಯಾಕ್ಟರ್ ಕೇಸ್, ಖಾಯಿಲೆ ಬಗ್ಗೆ ಎಲ್ಲಾ ಬೇಕಾ?. ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೆ ತಾಳ್ಮೆ ಇಲ್ಲ, ಜನ ಎಲ್ಲಿ ಮಾಹಿತಿ ಕೊಡ್ತಾರೆ, ನಡಿರಿ ಅಂತಾರೆ. ಆರ್ಥಿಕ ಸಾಮಾಜಿಕ ಮಾಹಿತಿ ತಗೊಂಡ್ರೆ ಸಾಕು. ಸಮೀಕ್ಷೆಯಲ್ಲಿ ಪ್ರಶ್ನೆ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಸಮೀಕ್ಷೆಯಲ್ಲಿ ಸರಳೀಕರಣಮಾಡಬೇಕಿತ್ತು. ಇವತ್ತೇ ನಾನು ಫಾರಂ ನೋಡಿದ್ದು. ಬಹಳ ಜಾಸ್ತಿ ಪ್ರಶ್ನೆ ಇದೆ. ಅದಕ್ಕೆ ಅವರಿಗೆ ಕಡಿಮೆ ಕೇಳಿ ಎಂದೆ. ಯಾರಿಗೂ ತಾಳ್ಮೆ ಇರಲ್ಲ. ಹಳ್ಳಿಯವರಿಗೆ ಇರುತ್ತದೆ, ನಗರದವರಿಗೆ ಇರಲ್ಲ ಎಂದರು.
ಕುರಿ ಎಷ್ಟಿದೆ, ಕೋಳಿ ಎಷ್ಟಿದೆ?. ಚಿನ್ನ ಎಷ್ಟಿದೆ ಎಂದು ಕೇಳಿದ್ರೆ ತಾಳ್ಮೆ ಇರಲ್ಲ. ನನಗೆ ಕೇಳ್ತಾರೆ ಕೋಳಿ ಸಾಕಿದ್ದೀರಾ ಎಂದು. ಊರಲ್ಲಿದೆ ಅದು ಬೇರೆ ವಿಷಯ. ನಾನು ಸಾರ್ವಜನಿಕರಿಗೆ ಹೇಳೋದಿಷ್ಟೇ. ಎಲ್ಲರೂ ಮಾಹಿತಿ ಕೊಡಿ. ಆನ್ಲೈನ್ನಲ್ಲಿ ಮಾಹಿತಿ ಕೊಡಲು ಅವಕಾಶ ಇದೆ. ಕೋರ್ಟ್ನವರು ಬಲವಂತ ಮಾಡಬೇಡಿ ಎಂದು ಈಗಾಗಲೇ ಹೇಳಿದ್ದಾರೆ. ಅವರು ಕೇಳೋದು ಕೇಳ್ತಾರೆ. ಸೂಕ್ಷ್ಮತೆಯಿಂದ ಬೆಂಗಳೂರಲ್ಲಿ ಸಮೀಕ್ಷೆ ಮಾಡಿ ಎಂದಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಡಿಸಿಎಂ ಅವರ ಪತ್ನಿ ಉಷಾ, ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದಿನೇನಿ, ಜಿಬಿಎ ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್, ಡಿಸಿಎಂ ಕಾರ್ಯದರ್ಶಿ, ಬೆಂಗಳೂರು ನಗರ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಬೆಂಗಳೂರು ನಗರ ಪಶ್ಚಿಮ ಪಾಲಿಕೆ ಆಯುಕ್ತ ರಾಜೇಂದ್ರನ್ ಉಪಸ್ಥಿತರಿದ್ದರು.

