ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಮೆಟ್ರೋ ಯೋಜನೆ ಗಮನಾರ್ಹ ಪ್ರಗತಿ ಸಾಧಿಸಿದೆ, ನಗರದ ಪ್ರಮುಖ ಸಾರಿಗೆ ವಿಧಾನವಾಗಲು ಸಿದ್ಧವಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ಮೆಟ್ರೋ ಜಾಲ ಬಲಪಡಿಸಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಮಾದವರ (ಬಿಐಇಸಿ) ಯಿಂದ ತುಮಕೂರನ್ನು ಸಂಪರ್ಕಿಸುವ 52.41 ಕಿಮೀ ಮಾರ್ಗಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸೂಚಿಸಲಾಗಿದೆ. ಇದರ ಜೊತೆಗೆ 50 ಕಿಮೀ ಮೆಟ್ರೋ ವಿಸ್ತರಣೆಯನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಮೂರು ಹೊಸ (ಚಲ್ಲಘಟ್ಟದಿಂದ ಬಿಡದಿ (15 ಕಿಮೀ), ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ (24 ಕಿಮೀ), ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ (11 ಕಿಮೀ)) ಮಾರ್ಗಗಳಿವೆ ಎಂದು ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರಸ್ತಾವನೆಯಲ್ಲಿ ಕಳೇನ ಅಗ್ರಹಾರ (ಗೊಟ್ಟಿಗೆರೆ)-ಜಿಗಣಿ-ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ಕಾಡುಗೋಡಿ ಟ್ರೀಪಾರ್ಕ್ ನ 68 ಕಿ.ಮೀ ಒಳಗೊಂಡಿದೆ.
ನಮ್ಮ ಮೆಟ್ರೋದ ಹಂತ-3ರ ಭಾಗವಾಗಿ, ಎರಡು ಪ್ರಮುಖ ಕಾರಿಡಾರ್‌ಗಳನ್ನು ರೂಪಿಸಲಾಗಿದೆ. ಕಾರಿಡಾರ್-1 ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳದವರೆಗೆ 29.20 ಕಿ.ಮೀ. ಉದ್ದದ ರಸ್ತೆ, ಕಾರಿಡಾರ್-2 ಹೊಸಹಳ್ಳಿಯಿಂದ ಕಡಬಗೆರೆಗೆ 11.45 ಕಿ.ಮೀ. ಉದ್ದದ ರಸ್ತೆಯಾಗಿದೆ.
ಹೆಚ್ಚುವರಿ ಹಂತ-3 ಪ್ರಸ್ತಾವನೆಗಳಲ್ಲಿ ಸರ್ಜಾಪುರದಿಂದ ಇಬ್ಬಲೂರು (ಹೊರ ವರ್ತುಲ ರಸ್ತೆ ಜಂಕ್ಷನ್) ವರೆಗಿನ 14 ಕಿ.ಮೀ. ಮಾರ್ಗ ಮತ್ತು ಅಗರದಿಂದ ಕೋರಮಂಗಲ 3 ನೇ ಬ್ಲಾಕ್‌ಗೆ 2.45 ಕಿ.ಮೀ. ಸಂಪರ್ಕ ಸೇರಿವೆ. ಇದು ನಗರದ ಅತ್ಯಂತ ಜನನಿಬಿಡ ಐಟಿ ಕಾರಿಡಾರ್‌ಗಳಲ್ಲಿ ಒಂದಾಗಿದೆ ಎಂದು ಡಿಸಿಎಂ ಶಿವಕುಮಾರ ಮಾಹಿತಿ ನೀಡಿದ್ದಾರೆ.