ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಿತಕ್ಕೆ ಕರಾಳ ಶಾಸನಗಳಾಗಿದ್ದು, , ಯಾವುದೇ ಕಾರಣಕ್ಕೂ ಇವು ಜಾರಿಯಾಗ ಬಾರದು ಎಂದು ಆಗ್ರಹಿಸಿ, ನ.26 ರಂದು ಜಿಲ್ಲಾ ಕಾರ್ಖಾನೆಗಳ ಮುಂಭಾಗ ಸಂಹಿತೆಗಳ ಪ್ರತಿಗಳನ್ನು ಸುಡುವ ಮೂಲಕ ಪ್ರತಿಭಟನೆ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸಿ.ನರಸಿಂಹಮೂರ್ತಿ ಹೇಳಿದ್ದಾರೆ.
ನಗರದ ಸಿಪಿಐ (ಎಂ) ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಹಿತೆಗಳು ಜಾರಿಯಾದ ದಿನದಿಂದ ಕಾರ್ಮಿಕರ ರಕ್ಷಣೆಗಾಗಿ, ರೂಪಿಸಿದ್ದ ಕಾರ್ಮಿಕ ಕಾಯ್ದೆಗಳು ರದ್ದಾಗಿವೆ. ಶ್ರಮ ಶಕ್ತಿ ನೀತಿ-2025 ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕರಾಳ ಮಸೂದೆಯನ್ನು ಜಾರಿಗೆ ತಂದಿದ್ದು, ಕಾರ್ಮಿಕರಿಗೆ ಮಾರಕವಾಗಿದೆ. ಲಕ್ಷಾಂತರ ಜನ ಕಾರ್ಮಿಕರ ತ್ಯಾಗ ಬಲಿದಾನಗಳಿಂದ ಪಡೆಯಲಾಗಿದ್ದ ಕಾರ್ಮಿಕ ಪರವಾದ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡುವ ಮೂಲಕ ಬಂಡವಾಳಶಾಹಿಗಳ ಪರವಾದ ಕಾರ್ಮಿಕ ಸಂಮಿತೆಗಳನ್ನು ಜಾರಿಗೆ ತಂದಿದೆ.
ಈಗ ಜಾರಿಗೊಳಿಸಿರುವ ಶ್ರಮ ಶಕ್ತಿ ನೀತಿ-2025 ಇದರಲ್ಲಿ ಕಾರ್ಮಿಕರ ಹಿತಕಾಯುವ ಯಾವುದೇ ಕಾನೂನುಗಳು ಇಲ್ಲದಾಗಿವೆ. ಇವುಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳಿಂದ ಸಂಘಟಿತ ಹೋರಾಟ ರೂಪಿಸಲಾಗಿದೆ. ಕೂಡಲೇ ಈ ಅಧಿಸೂಚನೆ ರದ್ದಾಗಬೇಕು. ರಾಜ್ಯ ಸರ್ಕಾರ ಈ ಸಂಹಿತೆಗಳನ್ನು ರೂಪಿಸಬಾರದು ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ಕಾರ್ಮಿಕರ ರಕ್ಷಣೆಗಾಗಿ ಇದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ನಾಲ್ಕು ಕಾರ್ಮಿಕ ಸಮಿತಿಗಳು ಅಧಿಕೃತವಾಗಿ ಜಾರಿಗೆ ತಂದಿದೆ. ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಸಂಬಂಧ ಭದ್ರತಾ ಸಂಹಿತೆ , ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಶರತ್ತುಗಳ ಸಂಹಿತೆ ತಂದಿದ್ದರು ಹಿಂದೆ ಇದ್ದ ಕಾರ್ಮಿಕ ಪರ ಕಾನೂನುಗಳನ್ನು ರದ್ದುಮಾಡಿದೆ.
ಈ ಕಾಯ್ದೆಗಳು ಇದ್ದಾಗ ನ್ಯಾಯಾಲಯದಲ್ಲಿ ಅನ್ಯಾಯದ ವಿರುದ್ಧ ಪ್ರಶ್ನಿಸಬಹುದಿತ್ತು. ಕಾರ್ಮಿಕ ಅಧಿಕಾರಿಗಳ ಬಳಿ ನಮ್ಮ ನಿವೇದನೆಯನ್ನು ಹೇಳಿಕೊಳ್ಳಬಹುದಾಗಿತ್ತು. ಅಧಿಕಾರಿಗಳು ಮಾಲೀಕರ ಪ್ರತಿನಿಧಿಗಳನ್ನು ಕರೆಸಿ, ಸಂಧಾನ ಪ್ರಕ್ರಿಯೆಯನ್ನು ನಡೆಸಬಹುದಿತ್ತು, ಆದರೆ ಈಗ ಈ 29 ಕಾನೂನುಗಳು ರದ್ದಾಗಿವೆ. ಈ ಬಗ್ಗೆ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ಕಾರ್ಮಿಕರ ಬೆಂಬಲ ನೀಡಬೇಕಿದೆ ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ನಳಿನಾಕ್ಷಿ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆ ಮಹಿಳಾ ಕಾರ್ಮಿಕರ ಹಿತಕ್ಕೂ ಮಾರಕವಾಗಿದೆ. ಈ ಬಗ್ಗೆ ಹೋರಾಟ ಅಗತ್ಯ. ಅಂಗನವಾಡಿ ಕಾರ್ಯಕರ್ತೆಯರಿಗೆ 2018ರಿಂದ ವೇತನ ಪರಿಷ್ಕರಣೆ ಆಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಡಿ.1 ರಿಂದ 10ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ಧಿಗೋಷ್ಟಿಯಲ್ಲಿ ಸಿಐಟಿಯು ಜಿಲ್ಲಾಉಪಾಧ್ಯಕ್ಷ ಬಸವರಾಜ್.ಎನ್.ಕೆ, ಕಾರ್ಯದರ್ಶಿಗಳಾದ ಅಂಜಮ್ ಖಾನ್, ಅನಿಲ್ ಗುಪ್ತಾ,ಖಜಾಂಚಿ ಮೋಹನ್ ಬಾಬು ಎಚ್.ಎನ್.ಹಾಜರಿದ್ದರು.

