ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಉಕ್ಕಿ ಹರಿಯುತ್ತಿರುವ ಒಳಚರಂಡಿ, ಮೌನಕ್ಕೆ ಶರಣಾದ ನಗರಸಭೆ ಎನ್ನುವ ತಲೆ ಬರಹದಡಿ ಚಂದ್ರವಳ್ಳಿ ಪ್ರಾದೇಶಿಕ ಪತ್ರಿಕೆಯಲ್ಲಿ ಜೂ.9 ರಂದು ಪ್ರಕಟಿಸಲಾದ ಒಳಚರಂಡಿ ಸಮಸ್ಯೆಯ ಸುದ್ದಿಗೆ ಚಿತ್ರದುರ್ಗ ನಗರಸಭೆ ಪೌರಾಯುಕ್ತರು ಸ್ಪಂದಿಸಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕ.ನ.ನೀ.ಸ ಮತ್ತು ಒ.ಚ ಮಂಡಳಿಗೆ ಪತ್ರ ಬರೆಯುವ ಮೂಲಕ ತುರ್ತು ಸಮಸ್ಯೆ ನಿವಾರಿಸುವಂತೆ ಕೋರಿದ್ದಾರೆ.
ಅಷ್ಟೇ ಅಲ್ಲದೆ ತಾವುಗಳು ಚಿತ್ರದುರ್ಗ ನಗರದಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿ ಎಂದು ಅವರು ತಮ್ಮ ಪತ್ರದ ಮುಖೇನ ಇಲಾಖೆಯನ್ನ ಎಚ್ಚರಿಸಿದ್ದಾರೆ.
ಕೋಟೆ ನಾಡು, ಜೋಗಿಮಟ್ಟಿ ಪ್ರಕೃತಿ ಧಾಮದ ಹಿರಿಮೆ ಹೊಂದಿರುವ ಚಿತ್ರದುರ್ಗ ನಗರದ ಬಡಾವಣೆ ಒಂದರಲ್ಲಿನ ಒಳ ಚರಂಡಿ ಸಂಪೂರ್ಣವಾಗಿ ಕಟ್ಟಿಕೊಂಡು ರಸ್ತೆಗೆ ಗಲೀಜು ನೀರು ಉಕ್ಕಿ ಹರಿದಿದೆ. ಪರಿಸ್ಥಿತಿ ಹದಗೆಟ್ಟು ಹೋಗಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಒಳಚರಂಡಿ ಕಟ್ಟಿಕೊಂಡು ದುರ್ನಾಥ ಬಡಿಯುವ ನೀರು ರಸ್ತೆಗೆ ಹರಿಯುವುದರಿಂದಾಗಿ ಜೋಗಿಮಟ್ಟಿಗೆ ಹೋಗುವ ಮಾರ್ಗ ಮತ್ತು ಪುಟ್ಟಗೌರಿ ಬಡಾವಣೆಗೆ ಹೊಂದಿಕೊಂಡಿರುವ ಮಾತೃಛಾಯಾ ಬಡಾವಣೆಯಲ್ಲಿನ ನಿವಾಸಿಗಳು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾತೃಛಾಯಾ ಬಡಾವಣೆಯಲ್ಲಿನ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕಲುಷಿತ ನೀರು ಉಕ್ಕಿ ಹರಿದು ರಸ್ತೆ ಸೇರಿದ್ದರ ಪರಿಣಾಮ ರಸ್ತೆಯಲ್ಲೇ ಮತ್ತೊಂದು ಗುಂಡಿ ನಿರ್ಮಾಣವಾಗಿದೆ.
ಶಾಲಾ, ಕಾಲೇಜ್ ಗಳಿಗೆ ತೆರಳುವ ಮಕ್ಕಳು, ವಯೋವೃದ್ಧರು, ಸಾರ್ವಜನಿಕರು ಇದೇ ರಸ್ತೆಯಲ್ಲಿ ಓಡಾಟ ಮಾಡಬೇಕಿದ್ದು ನಿತ್ಯ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಂದ್ರವಳ್ಳಿ ಪತ್ರಿಕೆಯಲ್ಲಿ ಗಮನ ಸೆಳೆಯಲಾಗಿತ್ತು. ಪೌರಾಯುಕ್ತರು ಸ್ಥಳ ಪರಿಶೀಲನೆ ಮಾಡಿ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ ಅಗತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ನಗರಸಭೆ ಈ ಎರಡು ಇಲಾಖೆಗಳು ಸಮಸ್ಯೆಯ ಗಂಭೀರತೆ ಅರಿತು ತುರ್ತು ಪರಿಹಾರ ಕಾರ್ಯ ಮಾಡುವ ಮೂಲಕ ಸಂಬಂಧಿಸಿದ ಬಡಾವಣೆ ನಿವಾಸಿಗಳ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಾಗಿದೆ.