ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಹಿಳೆಯೊಬ್ಬರ ಮೇಲೆ ಸಾಕು ನಾಯಿ ದಾಳಿ ಮಾಡಿ ಕೊಂದಿರುವ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮಹಿಳೆ ಕೊಂದ ರಾಟ್ ವೀಲರ್ ನಾಯಿಯ ಮಾಲೀಕ ಶೈಲೇಂದ್ರ ಕುಮಾರ ಎಂಬಾತನನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ವ್ಯಕ್ತಿ ನಗರದ ಶಿವಾಲಿ ಚಿತ್ರಮಂದಿರದ ಮಾಲೀಕರ ಅಳಿಯ. ಕಳೆದ ಹಲವು ವರ್ಷಗಳಿಂದ ರಾಟ್ ವೀಲರ್ ಶ್ವಾನಗಳನ್ನು ಸಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ 5ರ ಗುರುವಾರ ಶೈಲೇಂದ್ರ ಕುಮಾರ್ ತಮ್ಮ ಶ್ವಾನಗಳನ್ನು ಆಟೋದಲ್ಲಿ ತಂದು ದಾವಣಗೆರೆ ತಾಲೂಕಿನ ಹೊನ್ನೂರು ಕ್ರಾಸ್ ಬಳಿ ಬಿಟ್ಟು ಹೋಗಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ(38) ಎಂಬವರ ಮೇಲೆ ಬಿಟ್ಟ ಹೋದ ಶ್ವಾನಗಳು ದಾಳಿ ನಡೆಸಿವೆ. ಶ್ವಾನಗಳು ಕಡಿದು ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಈ ದುರ್ಘಟನೆಯಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆ ಕೊಂದ ನಾಯಿಗಳನ್ನು ನಿರಂತರವಾಗಿ ಬೆನ್ನುಬಿದ್ದು ಸೆರೆಹಿಡಿಯಲು ಹರಸಾಹಸ ಪಟ್ಟಿದ್ದರು. ಇದೀಗ ಶ್ವಾನಗಳೂ ಕೂಡ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ ಎನ್ನಲಾಗಿದೆ.
ಮೃತ ಅನಿತಾ ಅವರಿಗೆ ಮೂವರು ಮಕ್ಕಳಿದ್ದು, ಪತಿ 5 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮಲ್ಲಶೆಟ್ಟಿಹಳ್ಳಿಯಿಂದ ಹೊನ್ನೂರು ಗೊಲ್ಲರಹಟ್ಟಿಗೆ ಬರುವ ಸಂದರ್ಭದಲ್ಲಿ ಮಧ್ಯರಾತ್ರಿ, ಈ ಸಾಕಿದ ಶ್ವಾನಗಳು ದಾಳಿ ನಡೆಸಿದ್ದವು. ಘಟನೆ ನಡೆದ ಸ್ಥಳದ ಸಮೀಪವೇ ಇದ್ದ ನಿವಾಸಿಗಳು ತಡರಾತ್ರಿ ಶ್ವಾನಗಳ ಸದ್ದು ಕೇಳಿ ಹೊರಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಶ್ವಾನಗಳನ್ನು ಓಡಿಸಿ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿ, ಆಂಬ್ಯುಲೆನ್ಸ್ನಲ್ಲಿ ಗಾಯಾಳು ಮಹಿಳೆಯನ್ನು ಆಸ್ಪತ್ರೆ ದಾಖಲಿಸಲು ಪ್ರಯತ್ನಿಸಿದ್ದರು. ಆದರೆ, ಶ್ವಾನಗಳ ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ಸಾವನ್ನಪ್ಪಿದ್ದರು.

