ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಣ್ಣೆಗಳಿಂದ ತಯಾರದ ಬೋಂಡಾ, ಮೆಣಸಿಕಾಯಿ, ಚಿಪ್ಸ್, ಪಿಜ್ಜಾ ಮುಂತಾದ ಪ್ಯಾಕೇಟ್ ಜಂಕ್ ಫುಡ್ ಗಳನ್ನು ಸೇವನೆ ಮಾಡದೆ ದೂರ ಇದ್ದರೆ ಆರೋಗ್ಯ ರಕ್ಷಿಸಿಕೊಳ್ಳುವುದು ಸುಲಭ ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ಕರೆ ನೀಡಿದರು.
ಚಿತ್ರದುರ್ಗ ತಾಲೂಕಿನ ಭರಮಸಾಗರ ಸಿಎಚ್ ಸಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಬೀದಿ ಬದಿಯ ಆಹಾರಗಳನ್ನು ಸೇವನೆ ಮಾಡಬೇಡಿ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗಲಿದೆ. ಜಂಕ್ ಫುಡ್ ಸೇವೆ, ಎಣ್ಣೆ ಪದಾರ್ಥಗಳು ತೀವ್ರತರ ಅತಿಸಾರ ಬೇಧಿಗೂ ಕಾರಣ ಆಗಬಹುದು ಎಂದು ಅವರು ಎಚ್ಚರಿಸಿದರು.
ಅತಿಸಾರ ಬೇಧಿ ಆಗುತ್ತಿದ್ದರೆ ORS ಪುಡಿಯನ್ನು ನೀರಿನೊಂದಿಗೆ ಸೇವನೆ ಮಾಡಬೇಕು.
ORS ಒಂದು ದ್ರಾವಣವಾಗಿದ್ದು ದೇಹದಲ್ಲಿನ ನೀರಿನ ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆ ನೀಗಿಸಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ಅತಿಸಾರ ಅಥವಾ ವಾಂತಿಯಿಂದ ಬಳಲುತ್ತಿರುವಾಗ ದೇಹವನ್ನು ಹೈಡ್ರೇಟ್ ಮಾಡಲು ಬಳಸಲಾಗುತ್ತದೆ. ಪೌಷ್ಟಿಕ ಆಹಾರವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ತಿಳಿಸಿದರು.
ORS ಮತ್ತು ಪೌಷ್ಟಿಕ ಆಹಾರ ಎರಡೂ ಪ್ರತ್ಯೇಕವಾಗಿ ಮುಖ್ಯ, ಆದರೆ ಅವುಗಳ ಉದ್ದೇಶಗಳು ವಿಭಿನ್ನವಾಗಿವೆ. ORS ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣ ಮಾಡಲು ಬಳಸಲಾಗುತ್ತದೆ. ಆದರೆ ಪೌಷ್ಟಿಕ ಆಹಾರವು ದೇಹದ ಬೆಳವಣಿಗೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.
ORS ನಲ್ಲಿರುವ ನೀರು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಗ್ಲೂಕೋಸ್ ಪದಾರ್ಥಗಳು ದೇಹದಲ್ಲಿ ಕಳೆದುಹೋದ ದ್ರವ ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತದೆ ಎಂದು ಸಣ್ಣ ರಂಗಮ್ಮ ಹೇಳಿದರು.
ಪೌಷ್ಟಿಕ ಆಹಾರವು ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಆಹಾರವಾಗಿದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕೊಬ್ಬು, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಸೇರಿವೆ. ಪೌಷ್ಟಿಕ ಆಹಾರವು ಆರೋಗ್ಯಕರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಶ್ಯಕವಾಗಿ ಬೇಕಾಗಿದೆ ಎಂದು ಅವರು ತಿಳಿಸಿದರು.
ಮಕ್ಕಳ ಪೌಷ್ಟಿಕ ಆಹಾರ ಎದೆ ಹಾಲು, ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೇಳೆ ಕಾಳುಗಳು, ಮೊಟ್ಟೆಗಳು, ಮಾಂಸ ಮತ್ತು ಮೀನುಗಳಂತಹ ವಿವಿಧ ರೀತಿಯ ಆಹಾರಗಳನ್ನು ನೀಡಬೇಕು. ಚಿಕ್ಕ ಮಕ್ಕಳಿಗೆ, ವಿಶೇಷವಾಗಿ ಆರು ತಿಂಗಳ ನಂತರ, ಪೂರಕ ಆಹಾರಗಳನ್ನು ನೀಡುವುದು ಮುಖ್ಯ. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಮಗುವಿಗೆ ಹಾಲುಣಿಸುವುದನ್ನು ಮುಂದುವರಿಸಬೇಕು. ಜೊತೆಗೆ ಪೂರಕ ಆಹಾರಗಳನ್ನು ನೀಡಬೇಕು ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ತಿಳಿಸಿದರು.
LHV ಕಾತ್ಯಾಯಿನಿ ಮಾತನಾಡಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಎಚ್ಚರವಹಿಸಬೇಕು. ಡೆಂಗ್ಯೂ, ಮಲೇರಿಯಾ ನಿಯಂತ್ರಣದಲ್ಲಿದ್ದರೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ ಎಂದು ಅವರು ತಿಳಿಸಿದರು.
ಸಿಹೆಚ್ಒ ನಿರುಷಾ ಮಾತನಾಡಿ ವಯಕ್ತಿಕ ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಹಲವು ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಪ್ರವೀಣ್, ಡಾ.ಸುಷ್ಮಿತಾ. ಹೆಚ್ಐಒ ಮಹಂತೇಶ್ ಮತ್ತಿತರರು ಭಾಗವಹಿಸಿದ್ದರು.