ಚಂದ್ರವಳ್ಳಿ ನ್ಯೂಸ್, ಕಾರವಾರ:
ಚಪ್ಪಲಿ ಇಲ್ಲದೇ ಬರಿಗಾಲು, ಬುಡಕಟ್ಟು ವೇಷ ಭೂಷಣದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯಾತಿ ಗಣ್ಯರ ಎದುರು ನಡೆದುಕೊಂಡು ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ವೃಕ್ಷ ಮಾತೆ ತುಳಸಿ ಗೌಡ(86) ಸೋಮವಾರ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಒಕ್ಕಲಿಗ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ. ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ.
ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.
ಬಾಲ್ಯದಿಂದ ಹಿಡಿದು ಅಂತ್ಯದವರೆಗೂ ತುಳಸಿ ಗೌಡ ಅವರು ಮರ ಹಾಗೂ ಕಾಡಿನಲ್ಲೇ ಬೆಳೆದು ಬಂದವರು. 12ನೇ ವಯಸ್ಸಿನಲ್ಲಿ ತುಳಸಿ ಗೌಡ ಅವರಿಗೆ ಮರಗಳ ಜೊತೆಗಿನ ಬಾಂಧವ್ಯ ಆರಂಭವಾಯ್ತು. ಬಳಿಕ ಮರಗಳ ಜೊತೆಯಲ್ಲೇ ನಿತ್ಯ ಒಡನಾಟ ಬೆಳೆಸಿಕೊಂಡಿದ್ದರು. ಹೀಗಾಗಿ ಇವರನ್ನು ಅರಣ್ಯದ ಎನ್‌ಸೈಕ್ಲೋಪೀಡಿಯಾ ಎಂದು ಸಹ ಕರೆಯುತ್ತಾರೆ.
ಗಿಡ, ಮರ, ಬಳ್ಳಿ, ಅವುಗಳ ಜಾತಿ, ಯಾವ ಮರ ಹೇಗೆ ಬೆಳೆಯುತ್ತೆ, ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು, ಯಾವಾಗ ನೀರುಣಿಸಬೇಕು ಹೀಗೆ ತುಳಸಿ ಗೌಡ ಅವರಿಗೆ ತಿಳಿಯದ ಸಂಗತಿಗಳೇ ಇಲ್ಲ. ತುಳಸಿ ಗೌಡ ಅವರು 300ಕ್ಕೂ ಹೆಚ್ಚು ಪ್ರಭೇದದ ಮರಗಳ ಮಾಹಿತಿ ಬಲ್ಲವರಾಗಿದ್ದರು. ಇನ್ನೂ ಅವರು ನೆನಪು ಮಾತ್ರ. ಆದರೆ ಅವರ ನೆಟ್ಟ ಗಿಡ ಮರಗಳು ಸದಾ ಅವರ ಹೆಸರೇಳುತ್ತಿರುತ್ತವೆ.