ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಾಜ್ಯ ಸರ್ಕಾರ ಜಾತಿ ಗಣತಿಯಲ್ಲಿ ಎಡವಟ್ಟು ಮಾಡಿದ್ದಕ್ಕೆ ಒಂದೇ ವೇದಿಕೆಯಲ್ಲಿ ಪಂಚಪೀಠಾಧೀಶ್ವರರು ಸೇರಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರದ ರೇಣುಕಾ ಮಂದಿರದಲ್ಲಿ ನಡೆದ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತಿಗಣತಿಯಲ್ಲಿ ಎಲ್ಲೋ ಒಂದು ಕಡೆ ಭಗವಂತನ ದಯೆ ಇತ್ತು ಅನ್ಸುತ್ತೆ. ಜಾತಿಗಣತಿಯಲ್ಲಿ ನಾವೆಲ್ಲರೂ ಮನಸ್ಸು ಮಾಡಿದ್ರೆ ಎಲ್ಲಾ ಸರಿ ಹೋಗಲಿದೆ. 15 ವರ್ಷಗಳ ಬಳಿಕ ಸೇರಿರುವ ಪಂಚಪೀಠಾಧೀಶ್ವರರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಮುದಾಯವನ್ನು ಮೇಲ್ಮಟ್ಟಕ್ಕೆ ತರುವ ಶಕ್ತಿ ಪಂಚಪೀಠಾಧೀಶ್ವರರಿಗೆ ಇದೆ ಎಂದು ಹೇಳಿದರು.
ರಂಭಾಪುರಿ ಸ್ವಾಮೀಜಿ ಸೇರಿದಂತೆ ಉಳಿದ ನಾಲ್ವರು ಪೀಠದ ಶ್ರೀಗಳು ಮನಸ್ಸು ಮಾಡಿದ್ದೇ ಆದಲ್ಲಿ ಏನ್ ಬೇಕಾದ್ರು ಮಾಡುವ ಶಕ್ತಿ ಇದೆ. ಉಪಪಂಗಡಗಳು ಹಂಚಿ ಹೋಗಿದ್ದವರು ಒಂದಾಗಬೇಕಿದೆ. ಸಮಾಜದ ಬೇರು ಗಟ್ಟಿ ಮಾಡ್ಬೇಕಾಗಿದೆ. ನಾವು ರಾಜಕಾರಣಿಗಳು, ಇದು ನಮ್ಮ ಕೈಯಿಂದ ಆಗಲ್ಲ, ಅದು ಮಠಾಧಿಪತಿಗಳಿಂದ ಮಾತ್ರ ಸಾಧ್ಯ, ಐದು ಜನ ಶ್ರೀಗಳು ಕೆಲಸ ಮಾಡ್ಬೇಕಾಗಿದೆ. ಗುರುಗಳ ನಿಸ್ವಾರ್ಥ ಸೇವೆ ಅವಶ್ಯಕ, ಒಳಪಂಗಡಗಳು ಬಿಟ್ಟು ಒಂದಾಗಲಿಲ್ಲ ಎಂದರೆ ನಮ್ಮಪ್ಪನ ಆಣೆಗೆ ಏನೂ ಮಾಡಲು ಆಗಲ್ಲ ಎಂದು ಸೋಮಣ್ಣ ಎಚ್ಚರಿಸಿದರು.
ರಾಜ್ಯದ ಏಳು ಕೋಟಿ ಜನಸಂಖ್ಯೆ ಪೈಕಿ ಎರಡು ಕೋಟಿ ವೀರಶೈವ ಲಿಂಗಾಯತರು ಇದ್ದಾರೆ. ನಮ್ಮಲ್ಲೂ ಬಡತನ ಇದೆ. ಒಂದು ಅಲ್ಲ, ಅರ್ಧ ಎಕರೆ ಜಮೀನು ಹೊಂದಿದವರು ಇದ್ದಾರೆ. ಕೆಲವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ದಿ. ರಾಮಕೃಷ್ಣ ಹೆಗಡೆ, ದಿ. ಎಸ್. ಆರ್. ಬೊಮ್ಮಾಯಿ ಅವರು ಸಿಎಂ ಆಗಿದ್ದ ಕಾಲದಲ್ಲಿ ನಮ್ಮವರು ಬಡವರು ಎಂದು ಮನವರಿಕೆ ಮಾಡಿದ್ದೆ ಎಂದು ತಿಳಿಸಿದರು.
ರಾಜಕಾರಣ ನಿಂತ ನೀರಲ್ಲ, ಪರಮಪೂಜ್ಯರು ಅವಶ್ಯಕ, ಉಪ ಪಂಗಡಗಳನ್ನು ಒಂದು ಮಾಡಲಿಲ್ಲ ಎಂದರೆ ಉಳಿಗಾಲ ಇಲ್ಲ. ಮಹಾರಾಷ್ಟ್ರದಲ್ಲಿ 1 ಕೋಟಿ 10 ಲಕ್ಷ ನಮ್ಮ ಜನ ಸಂಖ್ಯೆ ಇದೆ. ಬೇರೆ ರಾಜ್ಯಗಳಲ್ಲಿ ವಿವಿಧ ಸಂಖ್ಯೆಗಳಲ್ಲಿ ಇದ್ದಾರೆ. ನಮ್ಮ ಕೂಗು ಪ್ರಧಾನಿಗೆ ಕೇಳಬೇಕಿದೆ ಎಂದು ಸೋಮಣ್ಣ ಕರೆ ನೀಡಿದರು.
ನಮ್ಮ ಮುಂದೆ ದೊಡ್ಡ ಸವಾಲಿದೆ. ಸೂರ್ಯ-ಚಂದ್ರ ಇರುವ ತನಕ ವೀರಶೈವ ಲಿಂಗಾಯತರ ಶಕ್ತಿ ನಿರಂತರವಾಗಿರುತ್ತದೆ. ಕೆಲ ಚೌಕಟ್ಟುಗಳನ್ನು ಮೀರಿ ಚಿಂತನೆ ಮಾಡ್ಬೇಕಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನರಗುಂದ ಶಾಸಕ ಸಿ. ಸಿ. ಪಾಟೀಲ್ ಮಾತನಾಡಿ ಪಂಚಪೀಠಾಧೀಶ್ವರರು ಒಂದು ಕಡೆ ಸೇರಿದ್ದು, ಹೊಸ ಅಧ್ಯಾಯ ದಾರಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಪಂಚಪೀಠಾಧೀಶ್ವರರು ಒಂದೇ ವೇದಿಕೆಯಲ್ಲಿ ಸೇರಿರುವುದರಿಂದ ನಮ್ಮ ಜನ್ಮ ಪಾವನ ಆಯಿತು. ಹಿರೇಮಠಗಳು ನಶಿಸಿ ಹೋಗುತ್ತಿವೆ. 25-30 ವರ್ಷಗಳ ಹಿಂದೆ ರಾಜಕಾರಣಕ್ಕೆ ಬರುತ್ತೇನೆ ಎಂದುಕೊಂಡಿರಲಿಲ್ಲ, ಅದಕ್ಕೆ ರಂಭಾಪುರಿ ಶ್ರೀಗಳು ಕಾರಣ. ರಂಭಾಪುರಿ ಶ್ರೀ ನರಗುಂದ ಅಡ್ಡಪಲ್ಲಕ್ಕಿ ಉತ್ಸವ ಮಾಡಿದ್ದು ನೆನಪು. ಅನಾರೋಗ್ಯಕ್ಕೆ ತುತ್ತಾದಾಗ ರಂಭಾಪುರಿ ಶ್ರೀ ಆಶೀರ್ವಾದದಿಂದ ಹುಷಾರ್ ಆಗಿದ್ದ ಘಟನೆ ನನ್ನ ಜೀವನದಲ್ಲಿ ನಡೆದಿದೆ ಎಂದು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ, ಶ್ರೀ ರಂಭಾಪುರಿ ವೀರಸಿಂಹಾಸನ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮೀಜಿಗಳವರು, ಶ್ರೀ ಉಜ್ಜನಿ ಸದ್ಧರ್ಮ ಸಿಂಹಾಸನಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಮಹಾಸ್ವಾಮೀಜಿಗಳವರು, ಶ್ರೀಶೈಲ ಸೂರ್ಯ ಸಿಂಹಾಸನಾ ಪೀಠದ ಪರಮಪೂಜ್ಯ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳವರು, ಶ್ರೀ ಕಾಶಿ ಜ್ಞಾನಸಿಂಹಾಸನಾ ಪೀಠದ ಪರಮಪೂಜ್ಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳವರು, ಶ್ರೀ ಕಾಶಿ ಜ್ಞಾನಸಿಂಹಾಸನಾ ಪೀಠದ ಪರಮಪೂಜ್ಯರಾದ ಡಾ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಗಳವರು, ಮುಕ್ತಿಮಂದಿರ ಕೇಂದ್ರದ ಅಧ್ಯಕ್ಷರಾದ ಶ್ರೀ ವಿಮಲ ರೇಣುಕವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿಗಳವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಎಸ್.ಎಸ್ ಮಲ್ಲಿಕಾರ್ಜುನ್, ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ಬಿ.ಪಿ ಹರೀಶ್, ಮಾಜಿ ಶಾಸಕರಾದ ಎಚ್.ಎಸ್ ಶಿವಶಂಕರ್, ಮಹಿಮಾ ಪಟೇಲ್, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್ ಹಾಗೂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.