ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಸ್. ಜಾಹ್ನವಿ ಅವರು ರೌಡಿಶೀಟರ್ಗಳಿಗೆ ಬೆವರಿಳಿಸುವಂತೆ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೊಸಪೇಟೆಯ ಡಿಆರ್ಮೈದಾನದಲ್ಲಿ ನಡೆದ ಈ ವಿಶೇಷ ರೌಡಿ ಪರೇಡ್ನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯ ಒಟ್ಟು 220 ರೌಡಿಶೀಟರ್ಗಳು ಭಾಗವಹಿಸಿದರು.
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಪರೇಡ್ ಆಯೋಜಿಸಿತು. ಪರೇಡ್ ವೇಳೆ ರೌಡಿಶೀಟರ್ಗಳನ್ನು ಸಾಲುಗಟ್ಟಿ ನಿಲ್ಲಿಸಿ, ಶಿಸ್ತು, ವರ್ತನೆ ಹಾಗೂ ಕಾನೂನು ಪಾಲನೆ ಕುರಿತು ಎಸ್ಪಿ ಜಾಹ್ನವಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. “ಅಪರಾಧ ಚಟುವಟಿಕೆಗಳಿಂದ ದೂರ ಇರಬೇಕು. ಸುಧಾರಣೆಗೆ ಪ್ರತಿದಿನವೂ ಅವಕಾಶ ಇದೆ. ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಿ” ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ, “ಒಮ್ಮೆ ಎಚ್ಚರಿಕೆ ನೀಡಿದ ಬಳಿಕವೂ ಚಟುವಟಿಕೆಗಳು ಮುಂದುವರಿದರೆ, ಇದಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಖಡಕ್ ಸಂದೇಶ ರವಾನಿಸಿದರು. ರೌಡಿಗಳಲ್ಲಿ ಕೆಲವರು ಪರೇಡ್ ವೇಳೆ ಸರಿಯಾಗಿ ನಿಲ್ಲದೇ ನಿರ್ಲಕ್ಷ್ಯ ತೋರಲು ಯತ್ನಿಸಿದಾಗ, “ಮೊದಲು ಸರಿಯಾಗಿ ನಿಲ್ಲೋದು ಕಲಿಯಿರಿ. ಯಾವ ಸಣ್ಣ ಕೇಸ್ನಲ್ಲಿ ಇರುವವನು ನೀನು? ಓವರ್ ಸ್ಮಾರ್ಟ್ ಆಗಿ ಆಡಬೇಡ” ಎಂದು ಎಸ್ಪಿ ಜಾಹ್ನವಿ ಗದರಿಸಿ ಕ್ಲಾಸ್ ತೆಗೆದುಕೊಂಡರು. ಈ ವೇಳೆ 15 ರೌಡಿಶೀಟರ್ಗಳಿಗೆ ಗಡಿಪಾರು ಮಾಡಲು ಸೂಚನೆ ನೀಡಿದರ.
ರೌಡಿಶೀಟರ್ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ವಿಜಯನಗರ ಜಿಲ್ಲೆಯಾದ್ಯಂತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ಪಿ ಜಾಹ್ನವಿ ಅವರ ಈ ಕ್ರಮ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

